ಉಡುಪಿಮಿತ್ರ ಪತ್ರಿಕೆ:
ವರದಿ: ಚಿತ್ತೂರು ಪ್ರಭಾಕರ ಆಚಾರ್ಯ
ಕೊಕ್ಕರ್ಣೆ, ಅ.೨೬: ಜಿಲ್ಲೆಯಲ್ಲಿ ಅನೇಕ ಸೇವಾ ಸಹಕಾರಿ ಸಂಘಗಳು ಹೆಸರಿಗೆ ಮಾತ್ರ ರೈತರ ಸಹಕಾರಿ ಸಂಘ ಅಂತ ಹೆಸರು ಇಟ್ಟುಕೊಂಡಿವೆ, ಆದರೆ ರೈತರಿಗೆ ಬೇಕಾದ ಕಾರ್ಯಕ್ರಮಗಳನ್ನು ಸಂಘಟಿಸುತ್ತಿಲ್ಲ. ಅದಕ್ಕೆ ಭಿನ್ನವಾಗಿ ಕೊಕ್ಕರ್ಣೆ ಸಿಂಡಿಕೇಟ್ ರೈತ ಸೇವಾ ಸಹಕಾರಿ ಸಂಘವು ನಿರಂತರವಾಗಿ ರೈತರಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಭಾರತೀಯ ಕಿಸಾನ್ ಸಂಘದ (ರಿ.) ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ನುಡಿದರು.

ಕೊಕ್ಕರ್ಣೆ ಶಿವಗಿರಿ ನಾರಾಯಣ ಗುರು ಸಭಾಭವನದಲ್ಲಿ ನಡೆದ ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಇದರ ‘ಸಿಂಡಿಕೇಟ್ ರೈತರ ಸಮಾವೇಶ ೨೦೨೬-೨೭’ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಎಲ್ಲಾ ರೈತರು ಬೆಳೆ ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡಿಕೊಂಡಲ್ಲಿ ಸರಕಾರದಿಂದ ಪರಿಹಾರ ಪಡೆಯಲು ಅನುಕೂಲವಾಗಲಿದೆ. ವರ್ಷಕ್ಕೆ ಎರಡು ಬಾರಿ ಬೆಳೆ ನೋಂದಾವಣೆ ಮಾಡಬೇಕು. ಬೆಳೆ ಸಮೀಕ್ಷೆ ಮಾಡುವವರ ತಪ್ಪಿನಿಂದಲೂ ರೈತರಿಗೆ ಪರಿಹಾರ ಸಿಗುತ್ತಿಲ್ಲ. ಕೊಕ್ಕರ್ಣೆ ರೈತರ ಸಹಕಾರಿ ಸಂಘವು ತನ್ನ ವ್ಯಾಪ್ತಿಯ ಎಲ್ಲಾ ರೈತರ ಬೆಳೆ ಸಮೀಕ್ಷೆ ಮಾಡಿ ಮಾದರಿ ಕೆಲಸ ಮಾಡಿದೆ. ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳು ಕೊಕ್ಕರ್ಣೆ ರೈತ ಸಹಕಾರಿ ಸಂಘದಂತೆ ಕೆಲಸ ಮಾಡಬೇಕಾಗಿದೆ ಎಂದರು.

ಸಾಧನೆಯ ವಿವರ ನೀಡಿದ ಅಧ್ಯಕ್ಷರು: ಸಂಘದ ಅಧ್ಯಕ್ಷ ಬಿ. ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಮಾತನಾಡಿ, “ಸಂಘದ ಮೂಲಕ 1,528 ಜನರಿಗೆ ಬೆಳೆ ಸಾಲ ಹಾಗೂ419 ಜನರಿಗೆ ಹೈನುಗಾರಿಕೆ ಸಾಲ ನೀಡಲಾಗಿದೆ. ಈ ವರ್ಷ1,028 ರೈತರ1836 ಎಕರೆ ಭೂಮಿಯ ಬೆಳೆ ಸಮೀಕ್ಷೆಯನ್ನು ಸಂಘದ ವತಿಯಿಂದಲೇ ಮಾಡಲಾಗಿದೆ,” ಎಂದು ತಿಳಿಸಿದರು.
ವಿಮೆ ಮತ್ತು ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ಅವರು,2024-25ರಲ್ಲಿ352 ರೈತರಿಗೆ ₹68,೦೦,೦೦೦ ಬೆಳೆ ವಿಮೆ ಜಮೆಯಾಗಿದೆ. 2025-26 ರಲ್ಲಿ 397 ರೈತರ 564 ಎಕರೆಗೆ ವಿಮೆ ಮಾಡಿಸಿದ್ದು,2026-27ರಲ್ಲಿ947 ರೈತರ 1,310 ಎಕರೆ ಭೂಮಿಗೆ ವಿಮೆ ಮಾಡಿಸಲಾಗಿದೆ. ಕರ್ಜೆ ಶಾಖೆಯಲ್ಲಿ ರೈತರಿಗೆ ಬೇಕಾಗುವ ಎಲ್ಲಾ ಸಲಕರಣೆಗಳನ್ನು ಮಾರಾಟ ಮಾಡುತ್ತಿದ್ದು, ಮುಂದೆ ಇದನ್ನು ಎಲ್ಲಾ ಶಾಖೆಗಳಿಗೂ ವಿಸ್ತರಿಸಲಿದ್ದೇವೆ. ರೈತರಿಗಾಗಿ ‘ರೈತನಿಧಿ’ ಯೋಜನೆ ಆರಂಭಿಸಿದ್ದು, ಅದಕ್ಕೆ ಬೇಕಾದ ಮೊತ್ತವನ್ನು ಸಂಘದ ಲಾಭಾಂಶದಿಂದ ಕಾಯ್ದಿರಿಸಲಾಗಿದೆ ಎಂದರು.

ಕೃಷಿ ಹಬ್ಬದ ಪ್ರತಿಪಾದನೆ: ಬ್ರಹ್ಮಾವರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪಿ. ವೈಕುಂಠ ಹೇರ್ಳೆ ಮಾತನಾಡಿ, ರೈತರು ಪ್ರತಿವರ್ಷ ಒಟ್ಟು ಸೇರಿ ಹಬ್ಬ ಆಚರಿಸುವ ವ್ಯವಸ್ಥೆಯಾಗಬೇಕು ಮತ್ತು ಅಲ್ಲಿ ಬೆಳೆಗಳ ಅಭಿವೃದ್ಧಿ ಮಾಹಿತಿ ಹಂಚಿಕೊಳ್ಳಬೇಕು. ಹಿರಿಯರು ಮಕ್ಕಳಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಹೇಳುವ ಮೊದಲು ಭೂಮಿಯ ಪಾಲುಪಟ್ಟಿ ಸರಿಯಾಗಿ ಮಾಡಬೇಕು. ಕುಟುಂಬಗಳಲ್ಲಿ ಭೂಮಿ ತುಂಡಾಗದಿರಲಿ ಎಂಬ ಕಾರಣಕ್ಕೆ ಮೂರ್ನಾಲ್ಕು ತಲೆಮಾರುಗಳಿಂದ ಪಾಲುಪಟ್ಟಿ ಮಾಡದೇ ಇರುವುದರಿಂದ ಇಂದು ರೈತರಿಗೆ ತೊಂದರೆಯಾಗುತ್ತಿದೆ ಎಂದರು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಪ್ರದೀಪ್ ಹೆಬ್ಬಾರ್ ಕೆ. ನಂಚಾರು ಸಹ ಮಾತನಾಡಿದರು.
ಸಂಘದ ಆಡಳಿತ ನಿರ್ದೇಶಕ ಅಭಿಷೇಕ್ ಶೆಟ್ಟಿ ಸ್ವಾಗತಿಸಿದರು. ಪ್ರತಾಪ್ ಹೆಗ್ಡೆ ಮಾರಾಳಿ ಪ್ರಾಸ್ತಾವಿಕವಾಗಿ ಮಾತನಾಡಿ, “ಇದು ನಮ್ಮ ಚೊಚ್ಚಲ ಕಾರ್ಯಕ್ರಮ. ಮುಂದಿನ ವರ್ಷದಿಂದ ಇದನ್ನು ರೈತರ ಹಬ್ಬವಾಗಿ ನಡೆಸಲಿದ್ದೇವೆ. ಸಂಘಕ್ಕೆ ಯಾವುದೇ ಲಾಭ ಇಲ್ಲದಿದ್ದರೂ ಜಿಲ್ಲೆಯಲ್ಲೇ ರೈತರಿಗೆ ಅತಿ ಹೆಚ್ಚು ಕೃಷಿ ಸಾಲವನ್ನು ನಮ್ಮ ಸಂಘ ನೀಡಿದೆ,” ಎಂದರು. ಇದೇ ಸಂದರ್ಭದಲ್ಲಿ ಯಶಸ್ವಿ ಹೈನುಗಾರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಬ್ರಹ್ಮಾವರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷೆ ಡಾ. ಸುನಿತಾ ಶೆಟ್ಟಿ ಕೆಂಜೂರು, සංಘದ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ವಂಡಾರು, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ನಿಧೀಶ್ ಕೆ.ಜೆ., ಹಿರಿಯ ಪಶುವೈದ್ಯಾಧಿಕಾರಿ ಮಂಜುನಾಥ ಅಡಿಗ ಎನ್., ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಸುರೇಶ್ ಬಂಗೇರ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಮೋಹನ್ ರಾಜ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ನಿರ್ದೇಶಕರಾದ ಶುಭಕರ ಶೆಟ್ಟಿ ಕಕ್ಕುಂಜೆ, ಪ್ರಸನ್ನ ಶೆಟ್ಟಿ ಹಳ್ಳಿ, ರವಿ ಪೂಜಾರಿ ಸಂತೇಕಟ್ಟೆ, ದಯಾನಂದ ನಾಯ್ಕ ತಡಾಲು, ಕೆ. ಉದಯ ಶೆಟ್ಟಿ ಗಿರಟೆ, ಶ್ರೀಮತಿ ಹೇಮಾವತಿ ಶೆಟ್ಟಿ ಮಾರಾಳಿ, ಶ್ರೀಮತಿ ಕಮಲ ಯಾನೆ ಶಾರದ, ಮನೋಜ್ ಶೆಟ್ಟಿ ಕಳ್ತೂರು, ಚಂದ್ರಶೇಖರ ಪೂಜಾರಿ ಆವರ್ಸೆ ಉಪಸ್ಥಿತರಿದ್ದರು.
ಡಾ. ಸುನಿತಾ ಶೆಟ್ಟಿ ವಂದಿಸಿದರು. ಶಿಶಿರ್ ಹಾಗೂ ಶರತ್ ಕಾರ್ಯಕ್ರಮ ನಿರೂಪಿಸಿದರು.



