udupimitra.in
  • September 6, 2026
  • Last Update September 6, 2026 9:52 am
  • Brahmavara

ಸುಜ್ಞಾನ ಕಾಲೇಜಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಭಕ್ತಿ, ಉತ್ಸಾಹದ ಸಡಗರ

ಸುಜ್ಞಾನ ಕಾಲೇಜಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಭಕ್ತಿ, ಉತ್ಸಾಹದ ಸಡಗರ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ : ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಲ್ಲಿನ ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ವಸತಿನಿಲಯದ ವಿದ್ಯಾರ್ಥಿಗಳಿಗಾಗಿ ಸಾಂಪ್ರದಾಯಿಕ ಹಾಗೂ ಅತ್ಯಂತ ಸಂಭ್ರಮದ ಕೃಷ್ಣಾ ಜನ್ಮಾಷ್ಟಮಿಯನ್ನು ಆಯೋಜಿಸಲಾಗಿತ್ತು. ದಿನವಿಡೀ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಬ್ಬದ ಮೆರುಗನ್ನು ಇಮ್ಮಡಿಗೊಳಿಸಿದವು.

ಆಕರ್ಷಕ ಮೆರವಣಿಗೆ, ಚಂಡೆ ವಾದನ ಹಾಗೂ ಹುಲಿವೇಷ:
ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಆವರಣದಿಂದ ಭವ್ಯ ಮೆರವಣಿಗೆ ಆರಂಭಗೊಂಡಿತು. ಚಂಡೆ ಮದ್ದಳೆಗಳ ಆಕರ್ಷಕ ನಾದ, ಕೃಷ್ಣ ಭಜನೆ, ವರ್ಣರಂಜಿತ ದಾಂಡಿಯಾ ನೃತ್ಯ ಹಾಗೂ ಬಾಲಕೃಷ್ಣನ ವೇಷಧರಿಸಿದ ಪುಟ್ಟ ಮಕ್ಕಳ ನಗುಮುಖ ಎಲ್ಲರ ಗಮನ ಸೆಳೆಯಿತು. ಕರಾವಳಿಯ ವಿಶಿಷ್ಟ ಸಂಸ್ಕೃತಿಯ ಸಂಕೇತವಾದ ಹುಲಿವೇಷ ಧರಿಸಿದ ವಿದ್ಯಾರ್ಥಿಗಳು ಚಂಡೆಯ ನಾದಕ್ಕೆ ತಕ್ಕಂತೆ ಕುಣಿದು ನೆರೆದಿದ್ದವರನ್ನು ರೋಮಾಂಚನಗೊಳಿಸಿದರು.

ಸಡಗರದ ಮೊಸರು ಕುಡಿಕೆ ಉತ್ಸವ
ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಮೊಸರು ಕುಡಿಕೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ಎತ್ತರದಲ್ಲಿ ಕಟ್ಟಲಾಗಿದ್ದ ಮೊಸರು ಕುಡಿಕೆಯನ್ನು ಒಡೆಯಲು ವಿದ್ಯಾರ್ಥಿಗಳು ಪೈಪೋಟಿಗೆ ಬಿದ್ದು ಮಾನವ ಪಿರಮಿಡ್ ರಚಿಸುವ ದೃಶ್ಯ ಹಬ್ಬದ ನೈಜ ಸಡಗರವನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿತು. ಮನೆಯಿಂದ ದೂರವಿದ್ದು ವ್ಯಾಸಂಗ ಮಾಡುತ್ತಿರುವ ವಸತಿನಿಲಯದ ಮಕ್ಕಳಿಗೆ ಈ ಆಚರಣೆಯು ಸ್ವಂತ ಮನೆಯಲ್ಲೇ ಹಬ್ಬ ಆಚರಿಸಿದ ಅನುಭವ ನೀಡಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎ. ಎಸ್. ಎನ್. ಹೆಬ್ಬಾರ್ ಅವರು ಮಾತನಾಡಿ, ನಮ್ಮ ದೇಶವು ಜಗತ್ತಿಗೆ ವಿಶ್ವಗುರು ಇದ್ದ ಹಾಗೆ. ನಮ್ಮ ಭಾರತೀಯ ಹಬ್ಬ-ಹರಿದಿನಗಳು ಬರೀ ಗೊಡ್ಡು ಸಂಪ್ರದಾಯಗಳಲ್ಲ. ವೈಜ್ಞಾನಿಕ ಹಿನ್ನೆಲೆ ಹಾಗೂ ಭವ್ಯ ಸಂಸ್ಕೃತಿಯನ್ನು ಒಳಗೊಂಡಿರುವ ಈ ಹಬ್ಬಗಳು ದೇಶದ ಆರ್ಥಿಕತೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಾಮಾಜಿಕ ಸಾಮರಸ್ಯವನ್ನು ಹೆಚ್ಚಿಸುತ್ತವೆ. ಇಲ್ಲಿನ ಕೃಷ್ಣಾಷ್ಟಮಿ ಆಚರಣೆಯ ಸಂಭ್ರಮ ಹಾಗೂ ಮಕ್ಕಳು ಖುಷಿಯಿಂದ ಭಾಗವಹಿಸುತ್ತಿರುವುದನ್ನು ನೋಡಿ ನನಗೆ ಅತ್ಯಂತ ಖುಷಿಯಾಗಿದೆ, ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಅವರು, ಶಿಕ್ಷಣ ಸಂಸ್ಥೆಗಳು ಕೇವಲ ಅಂಕಗಳನ್ನು ನೀಡುವ ಕೇಂದ್ರಗಳಾಗಬಾರದು. ನೈತಿಕ ಮೌಲ್ಯಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಯುವಪೀಳಿಗೆಗೆ ತಲುಪಿಸುವುದು ನಮ್ಮ ಮುಖ್ಯ ಧ್ಯೇಯ. ಕೃಷ್ಣ ಜನ್ಮಾಷ್ಟಮಿ ಆಚರಣೆಗಳು ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕೃತಿ,ಆಚಾರ-ವಿಚಾರಗಳ ಕುರಿತು ಅರಿವು ಮೂಡಿಸುತ್ತದೆ ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮತ್ತು ಭಕ್ತಿಯ ಭಾವನೆಯನ್ನು ಮೂಡಿಸಲು ಪ್ರತಿ ವರ್ಷವೂ ಅನೇಕ ಹಬ್ಬ ಹರಿದಿನಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವಸತಿನಿಲಯದ ಮಕ್ಕಳಿಗೆ ಹಬ್ಬದ ಕೊರತೆ ಆಗದಂತೆ ಕುಟುಂಬದ ವಾತಾವರಣ ನಿರ್ಮಿಸುವುದು ನಮ್ಮ ಸಂಸ್ಥೆಯ ಆದ್ಯತೆ, ಎಂದರು.

ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಅವರು, ಯುವಸಮುದಾಯ ಇಂದು ತಮ್ಮತನವನ್ನು ಹಾಗೂ ಸಂಸ್ಕೃತಿಯನ್ನು ಮರೆಯುತ್ತಿರುವ ಕಾಲದಲ್ಲಿ ಹಬ್ಬಗಳ ಮಹತ್ವ ಮತ್ತು ಅದರ ಹಿಂದಿರುವ ಸಾಂಸ್ಕೃತಿಕ ತತ್ವಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿತುಕೊಳ್ಳಬೇಕು, ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಸುಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲರಾದ ರಂಜನ್ ಬಿ.ಶೆಟ್ಟಿ, ಬಾರ್ಕೂರಿನ ಸುಜ್ಞಾನ ನ್ಯಾಷನಲ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಆಚಾರ್ಯ, ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್ ಕುಮಾರ್, ವಿದ್ಯಾರಣ್ಯ ಗ್ಲೋಬಲ್ ಶಾಲೆಯ ಪ್ರಾಂಶುಪಾಲರಾದ ಅನಿತಾ ಕುಮಾರಿ ಹಾಗೂ ಉಪಪ್ರಾಂಶುಪಾಲರಾದ ಸ್ಪೂರ್ತಿ ಎ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page