udupimitra.in
  • September 11, 2026
  • Last Update September 10, 2026 2:47 pm
  • Brahmavara

ಸರಕಾರಿ ಪ್ರೌಢಶಾಲೆ ಬೇಳೂರು: ಕನ್ನಡ ಶಿಕ್ಷಕ ರಾಜೀವ ಶೆಟ್ಟಿಅವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ

ಸರಕಾರಿ ಪ್ರೌಢಶಾಲೆ ಬೇಳೂರು: ಕನ್ನಡ ಶಿಕ್ಷಕ ರಾಜೀವ ಶೆಟ್ಟಿಅವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಬ್ರಹ್ಮಾವರ ಸೆ. ೧೦: ಬ್ರಹ್ಮಾವರ: ಬೇಳೂರು ಸರಕಾರಿ ಪ್ರೌಢಶಾಲೆಯಲ್ಲಿ ವಯೋನಿವೃತ್ತಿ ಹೊಂದಿದ ಕನ್ನಡ ಭಾಷಾ ಶಿಕ್ಷಕ ಶ್ರೀ ರಾಜೀವ ಶೆಟ್ಟಿ ಅವರಿಗೆ ಪ್ರೌಢಶಾಲಾ ವತಿಯಿಂದ ಆತ್ಮೀಯ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಾಘವೇಂದ್ರ ಗಾಣಿಗ ಮಾತನಾಡಿ, ರಾಜೀವ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಉತ್ತಮ ಬದುಕುವ ಪಾಠ ಕಲಿಸಿದವರು. ಶಾಲೆಯ ಅಭಿವೃದ್ಧಿಯಲ್ಲಿ ಹಾಗೂ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಅವರು ಸಾಕಷ್ಟು ಶ್ರಮಿಸಿದ್ದಾರೆ ಎಂದರು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ ಮಾತನಾಡಿ, ರಾಜೀವ ಶೆಟ್ಟರು ಬೇಳೂರು ಶಾಲೆ ತಮ್ಮದೇ ಶಾಲೆ ಎಂಬ ಭಾವನೆಯಿಂದ ಸೇವೆ ಸಲ್ಲಿಸಿದ್ದಾರೆ. ಆದರೆ ಇಂತಹ ಉತ್ತಮ ಶಿಕ್ಷಕರಿಗೆ ಇಲ್ಲಿನ ಕೆಲವು ವ್ಯಕ್ತಿಗಳು ನೋವು ನೀಡುವ ಸನ್ನಿವೇಶವನ್ನು ಏರ್ಪಡಿಸಿದ್ದು ಬೇಸರದ ಸಂಗತಿ ಎಂದು ಅಭಿಪ್ರಾಯಪಟ್ಟರು.

ಡಯಟ್ ಉಪನ್ಯಾಸಕ ಡಾ. ಕಿಶೋರ್ ಶೆಟ್ಟಿ ಮಾತನಾಡಿ, ರಾಜೀವ ಮಾಸ್ಟ್ರು ಎಲ್ಲರಿಗೂ ಮಾರ್ಗದರ್ಶಕರಾಗಿ, ಕಷ್ಟದ ಸಮಯದಲ್ಲಿ ಅಣ್ಣನಂತೆ ನೆರವಾದವರು ಎಂದು ಸ್ಮರಿಸಿದರು. ಮುಖ್ಯಶಿಕ್ಷಕಿ ರಾಜಲಕ್ಷ್ಮೀ ರಾವ್ ಮಾತನಾಡಿ, ರಾಜೀವ ಶೆಟ್ಟರು ಸಹಶಿಕ್ಷಕರಲ್ಲಿ ಚಟುವಟಿಕೆ ತುಂಬಿ ಕೆಲಸ ಮಾಡಿಸುತ್ತಿದ್ದರು. ಪಾಠದ ಸಮಯ ಹೊರತುಪಡಿಸಿ ಉಳಿದ ಸಮಯದಲ್ಲಿ ಹಾರೆ ಹಿಡಿದು ಕೆಲಸ ಮಾಡಿ ಶಾಲಾ ಮಕ್ಕಳಿಗೆ ತರಕಾರಿ ಬೆಳೆಸಿಕೊಡುತ್ತಿದ್ದರು. ಮೈದಾನ ಸರಿಪಡಿಸಿ, ಶಾಲೆಗೆ ಬಸ್ ಸೌಕರ್ಯಕ್ಕಾಗಿ ಹೋರಾಡಿದ್ದರು. ಸಂಜೆ ವೇಳೆ ಶಿಕ್ಷಕರೊಂದಿಗೆ ಊರೂರು ತಿರುಗಿ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರ ಮನವೊಲಿಸುತ್ತಿದ್ದರು ಎಂದರು.

ಶಿಕ್ಷಕಿಯರಾದ ಮಂಜುಳಾ ಹಾಗೂ ಅಮೃತಕಲಾ ಮಾತನಾಡಿ, ರಾಜೀವ ಶೆಟ್ಟರು ಶಾಲೆಯ ಹಿರಿಯಣ್ಣನಂತಿದ್ದರು. ಅವರು ಬಂದಾಗ ಶಾಲೆಯಲ್ಲಿದ್ದುದು ಕೇವಲ 21 ಮಕ್ಕಳು. ಆದರೆ ಅವರ ನಿರಂತರ ಪ್ರಯತ್ನದಿಂದ ಆ ಸಂಖ್ಯೆ 83ಕ್ಕೆ ಏರಿಕೆಯಾಯಿತು ಎಂದು ತಿಳಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಮಾನಾಥ್ ಮಾತನಾಡಿ, ಯಾವುದೇ ಮಗು ಶಾಲೆಯಿಂದ ವಂಚಿತವಾಗದಂತೆ ನೋಡಿಕೊಳ್ಳುತ್ತಿದ್ದರು ಎಂದರು.

ವಿದ್ಯಾರ್ಥಿಗಳಾದ ಲಕ್ಷ್ಮೀ, ಸಂಜನಾ, ದೀಕ್ಷಿತಾ, ಶರಣ್ಯಾ, ಧನ್ವಿತಾ, ರಂಜಿತ್, ಶ್ರಾವ್ಯ, ಕೌಸ್ತುಭ ಹಾಗೂ ನಿವೃತ್ತ ಶಿಕ್ಷಕರಾದ ಸೂರಪ್ಪ ಹೆಗ್ಡೆ, ಮಣಿಗೇರಿ ಚಂದ್ರಶೇಖರ ಶೆಟ್ಟಿ, ರಮೇಶ್ ಶೆಟ್ಟಿ ಅವರು ರಾಜೀವ ಶೆಟ್ಟರ ಸಂಘಟನಾ ಚಾತುರ್ಯ ಮತ್ತು ನಿರಂತರ ಸೇವೆಯನ್ನು ಕೊಂಡಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜೀವ ಶೆಟ್ಟಿಯವರು, ಶಾಲಾ ವಿಷಯದಲ್ಲಿ ಸಾರ್ವಜನಿಕರಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ರಾಜಕೀಯ ಮಾಡಬಾರದು ಎಂದು ಮನವಿ ಮಾಡಿ, ತಮಗೆ ಸಹಕರಿಸಿದ ಸಹದ್ಯೋಗಿಗಳು, ಪೋಷಕರು ಮತ್ತು ಶಾಲಾಭಿವೃದ್ಧಿ ಸಮಿತಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಇಲಾಖಾಧಿಕಾರಿ ಶ್ರೀಮತಿ ದೀಪಾ ರಾಜೀವ ಶೆಟ್ಟಿ, ಡಯಟ್ ಪ್ರಾಂಶುಪಾಲ ಅಶೋಕ್ ಕಾಮತ್, ಬೇಳೂರು ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸತ್ಯನಾರಾಯಣ ಅಡಿಗ, ಮಾಜಿ ಗ್ರಾ.ಪಂ. ಅಧ್ಯಕ್ಷ ಜಯಶೀಲ ಶೆಟ್ಟಿ, ನಿವೃತ್ತ ಎ.ಎಸ್.ಐ. ಆನಂದ ಶೆಟ್ಟಿ ಹಾಗೂ ಸಿಆರ್‌ಪಿ ಶ್ರೀಮತಿ ಸುಚಿತ್ರಾ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ರಾಜಲಕ್ಷ್ಮೀ ರಾವ್ ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶ್ರೀಮತಿ ಮಂಜುಳ ವಂದಿಸಿದರು. ಶಿಕ್ಷಕಿ ಶ್ರೀಮತಿ ಮಂಗಳ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page