ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಆಲೂರು,ಸೆ.೮: ಕುಂದಾಪುರದ ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಅ.4 ರಂದು ಚಿತ್ರಕೂಟ ಆಯುರ್ವೇದ ಹಬ್ಬ ೨೦೨೬ ಆಯೋಜಿಸುತ್ತಿದ್ದೇವೆ ಎಂದು ಚಿತ್ರಕೂಟ ಚಿಕಿತ್ಸಾಲಯದ ಆಡಳಿತ ನಿರ್ದೇಶಕ ಡಾ.ರಾಜೇಶ್ ಬಾಯರಿ ನುಡಿದರು.
ಅವರು ಸೆ.8 ರಂದು ಚಿತ್ರಕೂಟ ಆವರಣದಲ್ಲಿ ನಡೆದ ಚಿತ್ರಕೂಟ ಆಯುರ್ವೇದ ಹಬ್ಬದ ಲೋಗೋ ಬಿಡುಗಡೆ ಕಾರ್ಯಕ್ರಮದ ಸಂದರ್ಭ ಹಬ್ಬದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಕರಾವಳಿ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ‘ಆಯುರ್ವೇದ ನಾಳೆಗೆ | ಹಳ್ಳಿಯ ಮಡಿಲಲ್ಲಿ ಆರೋಗ್ಯ ಹಬ್ಬ ಎಂಬ ಧ್ಯೇಯವಾಕ್ಯದೊಂದಿಗೆ ಈ ‘ಚಿತ್ರಕೂಟ ಆಯುರ್ವೇದ ಹಬ್ಬ ೨೦೨೬ ಆಯೋಜಿಸುತ್ತಿದ್ದೇವೆ.
ಈ ಹಬ್ಬವನ್ನು ಚಿತ್ರಕೂಟ ಜೆನ್ ಜೀ ಆಯುರ್ವೇದ ಅಭಿಯಾನ , ಹಳ್ಳಿಯಲ್ಲೊಂದು ದಿನ ಎಂಬ ಎರಡು ಆಯಾಮಗಳಲ್ಲಿ ಆಯೋಜಿಸುತ್ತಿದ್ದೇವೆ.
ಯುವಜನತೆಯನ್ನು ಅವರದ್ದೇ ಭಾಷೆಯಲ್ಲಿ ತಲುಪಲು ಇನ್‌ಸ್ಟಾಗ್ರಾಮ್ ರೀಲ್ಸ್ ಸ್ಪರ್ಧೆ ಹಮ್ಮಿಕೊಂಡಿದ್ದು, 75,000 ಮೌಲ್ಯದ ಆಕರ್ಷಕ ಬಹುಮಾನಗಳನ್ನು ನಿಗದಿಪಡಿಸಿದ್ದು ಸೆಪ್ಟೆಂಬರ್ ೩೦ ಕೊನೆಯ ದಿನವಾಗಿದೆ. ಜತೆಗೆ ಅಕ್ಟೋಬರ್ 4ರಂದು ಶಾಲಾ ವಿದ್ಯಾರ್ಥಿಗಳಿಗಾಗಿ ಭಾಷಣ, ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಗಳು ಮತ್ತು ಯುವಜನತೆ-ವೈದ್ಯರ ನಡುವೆ ಮುಕ್ತ ವಿಚಾರ ಸಂಕಿರಣ ನಡೆಯಲಿದೆ ಎಂದರು.
ಭಾನುವಾರದ ರಜಾ ದಿನ ಕುಟುಂಬ ಸಮೇತರಾಗಿ ಹಳ್ಳಿಯ ಬದುಕನ್ನು ಕಣ್ತುಂಬಿಕೊಳ್ಳಲು ಹಳ್ಳಿಯಲ್ಲೊಂದು ದಿನ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದ್ದು ಅಂದು ವೈದ್ಯರಿಂದ ಉಚಿತ ನಾಡಿ/ದೇಹಪ್ರಕೃತಿ ಪರೀಕ್ಷೆ, ಗೋಮಾತೆ ಅಪ್ಪುಗೆ, ಹಿತ್ತಿಲ ಗಿಡಮೂಲಿಕೆಗಳ ಕಷಾಯ ಶಾಲೆ, ೨೫೦ಕ್ಕೂ ಹೆಚ್ಚು ಗಿಡಮೂಲಿಕೆಗಳ ಔಷಧ ವನ ನಡಿಗೆ, ಹಳ್ಳಿಯ ಆಟಗಳು, ಸಾಂಪ್ರದಾಯಿಕ ಮತ್ತು ಆರೋಗ್ಯ ಆಹಾರ ಮೇಳ-ಸಂತೆ ಹಾಗೂ ಪಂಚಕರ್ಮ ಚಿಕಿತ್ಸೆಗಳ ಪರಿಚಯ ಹಮ್ಮಿಕೊಳ್ಳಲಾಗಿದೆ. ಹಬ್ಬದಲ್ಲಿ ವಿಶೇಷ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ . ಪ್ರವೇಶ ಸಂಪೂರ್ಣ ಉಚಿತವಾಗಿದೆ. ಆದರೆ ಸೂಕ್ತ ವ್ಯವಸ್ಥೆಗಾಗಿ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕಿದೆ ಎಂದರು.
ಶಿಕ್ಷಕರಾದ ಚಂದ್ರಶೇಖರ ಶೆಟ್ಟಿ ಶುಭ ಹಾರೈಸಿದರು.
ಹಿರಿಯ ಕೃಷಿಕರಾದ ಮಹಾಬಲ ಬಾಯರಿ ಲೋಗೋ ಅನಾವರಣ ಮಾಡಿದರು. ಈ ಸಂದರ್ಭ ಶ್ರೀಮತಿ ಕಲಾವತಿ ಬಾಯರಿ, ಡಾ.ಅನುಲೇಖಾ ರಾಜೇಶ್ ಬಾಯರಿ, ಪ್ರಮುಖರಾದ ಡಾ. ಪ್ರಸನ್ನ ಕಾಕುಂಜೆ, ರವೀಂದ್ರನಾಥ ಶೆಟ್ಟಿ ಇಡೂರು, ರವೀಂದ್ರ ಶೆಟ್ಟಿ ಚಿತ್ತೂರು, ಉದಯ ಜಿ.ಪೂಜಾರಿ ಚಿತ್ತೂರು, ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಬಾಲಕೃಷ್ಣ ಶೆಟ್ಟಿ ಇಡೂರು, ರಾಜೇಶ್ ದೇವಾಡಿಗ ಆಲೂರು, ಪ್ರಸನ್ನ ಶೆಟ್ಟಿ ಆಲೂರು, ಗೋವರ್ದನ ಜೋಗಿ ಹರವರಿ, ಗುಂಡು ಪೂಜಾರಿ ಹರವರಿ, ದಿವಾಕರ ಆಚಾರ್ಯ ಮಾರಣಕಟ್ಟೆ, ವಿಜಯ ಆಚಾರ್ಯ ಮಾರಣಕಟ್ಟೆ, ಚಂದ್ರಯ್ಯ ಆಚಾರ್ಯ ಕಳಿ ಇನ್ನಿತರರು ಉಪಸ್ಥಿತರಿದ್ದರು.
ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊ. ೯೧೮೭೪೭೧೫೭೮ ಸಂಪರ್ಕಿಸಬಹುದು ಎಂದು ಡಾ.ರಾಜೇಶ್ ಬಾಯರಿ ತಿಳಿಸಿದ್ದಾರೆ.



