udupimitra.in
  • October 17, 2026
  • Last Update October 17, 2026 2:40 pm
  • Brahmavara

ಬ್ರಹ್ಮಾವರ : ಕರಾವಳಿಯಲ್ಲಿ ಹೈಕೋರ್ಟ್ ಪೀಠಕ್ಕೆ ಹಕ್ಕೊತ್ತಾಯ

ಬ್ರಹ್ಮಾವರ : ಕರಾವಳಿಯಲ್ಲಿ ಹೈಕೋರ್ಟ್  ಪೀಠಕ್ಕೆ ಹಕ್ಕೊತ್ತಾಯ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ, ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಬ್ರಹ್ಮಾವರ, ಅ.೧೭: ಮಹಾರಾಷ್ಟ್ರ, ನಾಗ್ಪುರ, ಗೋವಾ ಭಾಗಗಳಲ್ಲಿ ಸಂಚಾರಿ ಹೈಕೋರ್ಟ್ ಪೀಠ ಇದೆ. ಅದೇ ರೀತಿಯಲ್ಲಿ ಕರಾವಳಿಯ ಜನರ ಅನುಕೂಲಕ್ಕೆ ಕೂಡಲೆ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು. ಸಂವಿಧಾನದ ಆಶಯದಂತೆ ಎಲ್ಲಾ ಜನಸಾಮಾನ್ಯರಿಗೆ ನ್ಯಾಯದಾನ ವ್ಯವಸ್ಥೆಯ ಹಕ್ಕನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯುವ ಪ್ರಯತ್ನವನ್ನು ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ಮಾಡಬೇಕು ಎಂದು ಉಡುಪಿ ಜಿಲ್ಲಾ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕ, ನ್ಯಾಯವಾದಿ ಪ್ರೇಮ ಪ್ರಸಾದ್ ಶೆಟ್ಟಿ ಒತ್ತಾಯಿಸಿದರು. ಅವರು ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ನೇತೃತ್ವದಲ್ಲಿ ಬ್ರಹ್ಮಾವರ ತಾಲೂಕಿನ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಬ್ರಹ್ಮಾವರ ಬಂಟರ ಭವನದಲ್ಲಿ ನಡೆದ ಹಕ್ಕೊತ್ತಾಯ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳವರು ಹೈಕೋರ್ಟ್ ಪೀಠಕ್ಕೆ ಆಗ್ರಹಿಸಿ ಬೆಂಬಲ ಪತ್ರವನ್ನು ನೀಡಬೇಕು ಹಾಗೂ ಸಾಮಾಜಿಕ ಜಾಲತಾಣದಲ್ಲೂ ಹೈಕೋರ್ಟ್ ನ್ಯಾಯಪೀಠಕ್ಕೆ ಆಗ್ರಹಿಸಬೇಕು ಎಂದರು.

ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ ಕರಾವಳಿಯ ಅನೇಕ ಪ್ರಕರಣಗಳು ಹೈಕೋರ್ಟಿನಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ. ಆದ್ದರಿಂದ ಹೈಕೋರ್ಟ್ ಪೀಠ ಸ್ಥಾಪನೆಯಾದಲ್ಲಿ ಬೇಗ ಇತ್ಯರ್ಥವಾಗಲು ಅನುಕೂಲವಾಗಲಿದೆ ಎಂದರು.

ಬ್ರಹ್ಮಾವರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಕಾಡೂರು ಪ್ರವೀಣ್‌ಕುಮಾರ್ ಶೆಟ್ಟಿ ಮಾತನಾಡಿ ಶೇ೨೦ರಿಂದ ಶೇ.೩೦ರಷ್ಟು ಕರಾವಳಿ ಭಾಗದ ಕೇಸುಗಳು ಹೈಕೋರ್ಟಿನಲ್ಲಿವೆ. ಕರಾವಳಿಯ ಜನರು ಹೈಕೋರ್ಟಿಗಾಗಿ ೫೦೦ ಕಿ.ಮೀ. ದೂರ ಹೋಗಬೇಕಾಗಿದೆ. ಇದು ಬಡವರಿಗೆ ಬಹಳ ಕಷ್ಟವಾಗಿದೆ. ಆದ್ದರಿಂದ ಕರಾವಳಿಯ ೩ ಜಿಲ್ಲೆಗಳಿಗೂ ಅನುಕೂಲಕರ ಸ್ಥಳದಲ್ಲಿ ಹೈಕೋರ್ಟ್‌ಪೀಠ ಸ್ಥಾಪನೆಯಾಗಬೇಕು ಎಂದರು.
ಜ್ಞಾನ ವಸಂತ ಶೆಟ್ಟಿಯವರು ಮಾತನಾಡಿ ಮುತ್ತಾತ ಮಾಡಿದ ಕೇಸು ನಮ್ಮ ಕಾಲದಲ್ಲಿ ಇತ್ಯರ್ಥಗೊಂಡಲ್ಲಿ ಅದಕ್ಕೆ ಅರ್ಥವಿಲ್ಲ. ನಮ್ಮ ಜೀವಿತ ಕಾಲದಲ್ಲಿ ದಾಖಲೆಗೊಂಡ ಕೇಸುಗಳು ನಮ್ಮ ಕಾಲದಲ್ಲೇ ಇತ್ಯರ್ಥವಾಗಲು ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂದರು.


ಶೇಖರ ಹಾವಂಜೆ, ನ್ಯಾಯವಾದಿ ಅಖಿಲ್ ಹೆಗ್ಡೆ, ಸದಾಶಿವ ಶೆಟ್ಟಿ ಹೇರೂರು, ನಮ್ಮ ಭೂಮಿ ಸಂಸ್ಥೆಯ ರಾಮಾಜಿ ಮಾತನಾಡಿ ಉಡುಪಿ ಜಿಲ್ಲೆಯಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಶೇಡಿಕೊಡ್ಲು ವಿಠಲ ಶೆಟ್ಟಿ, ಬಾರಕೂರು ಶಾಂತಾರಾಮ ಶೆಟ್ಟಿ, ಬ್ರಹ್ಮಾವರ ಸ್ಫೋರ್ಟ್ಸ್ ಕ್ಲಬ್ ಮಾಜಿ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ, ಸಮತಾ ಸೈನಿಕದಳ ಮಹಿಳಾ ಅಧ್ಯಕ್ಷೆ ಜ್ಯೋತಿ ಶಿರಿಯಾರ, ಹಿರಿಯನಾಗರಿಕರ ವೇದಿಕೆಯ ಮಾಜಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಕಾರ್ಯದರ್ಶಿ ಸಂಕಯ್ಯ ಶೆಟ್ಟಿ, ಲಯನ್ಸ್ ಅಧ್ಯಕ್ಷ ಸುದೇಶ್ ಹೆಗ್ಡೆ, ಲಯನ್ಸ್ ಮಾಜಿ ಅಧ್ಯಕ್ಷ ಜಿ.ಬಾಲಕೃಷ್ಣ ಶೆಟ್ಟಿ, ರೋಟರಿ ಅಧ್ಯಕ್ಷ ಪ್ರಮೋದ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಮಹೇಶ್ ತಡೆಕಲ್ಲು, ವಕೀಲರ ಸಂಘದ ಸದಸ್ಯರು, ವಿವಿಧ ಸಂಘಟನೆಗಳ ಪ್ರಮುಖರು, ಹಿರಿಯ ನಾಗರಿಕರ ವೇದಿಕೆ ಸದಸ್ಯರು ಎಸ್.ಎಂ.ಎಸ್. ಹಾಗೂ ಇತರ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಾಮಾಜಿಕ ಹೋರಾಟಗಾರ ಅಲ್ವಿನ್ ಅಂದ್ರಾದೆ ನಿರೂಪಿಸಿ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page