udupimitra.in
  • October 11, 2026
  • Last Update October 11, 2026 6:05 pm
  • Brahmavara

ಕಾರ್ಕಡ ಗೆಳೆಯರ ಬಳಗದಿಂದ ರಾಮ ಮೊಗವೀರರಿಗೆ ಕಾರಂತ ಪುರಸ್ಕಾರ

ಕಾರ್ಕಡ ಗೆಳೆಯರ ಬಳಗದಿಂದ ರಾಮ ಮೊಗವೀರರಿಗೆ ಕಾರಂತ ಪುರಸ್ಕಾರ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆಯ ಸುದ್ಧಿ:

ಉಡುಪಿ, ಸೆ.೨೮: ಶಿವರಾಮ ಕಾರಂತರು ವಿಶ್ವ ವ್ಯಾಪಿಯಾಗಿ ಹೆಸರು ಮಾಡಿ ನಡೆದಾಡುವ ವಿಶ್ವಕೋಶ, ಕಡಲ ತಡಿಯ ಭಾರ್ಗವ ಎನಿಸಿಕೊಂಡರು. ಅವರ ಬರೆಹಗಳು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಇರುತ್ತಿದ್ದವು. ಅವರು ಪುಸ್ತಕ ಬರೆಯುವ ಮೊದಲು ಸಂಪೂರ್ಣ ಮಾಹಿತಿ ಸಂಗ್ರಹಿಸಿಕೊಂಡು ಬರೆಯುತ್ತಿದ್ದರು.
ಕಾರಂತರು ನಂಬಿದವರನ್ನು ಯಾವತ್ತೂ ಮರೆತವರಲ್ಲ. ಕಾರಂತರನ್ನು ಕಡಲಿಗೆ ಹೋಲಿಸಿದ್ದಾರೆ. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದವರು ಕಾರಂತರು ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ , ಉದ್ಯಮಿ ಆನಂದ ಸಿ.ಕುಂದರ್ ನುಡಿದರು. ಅವರು ಗೆಳೆಯರ ಬಳಗ (ರಿ.) ಕಾರ್ಕಡ, ಸಾಲಿಗ್ರಾಮ ಇವರ ಆಶ್ರಯದಲ್ಲಿ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ವಠಾರದಲ್ಲಿ ನಡೆದ ಡಾ. ಕೋಟ ಶಿವರಾಮ ಕಾರಂತರ ಜನ್ಮ ದಿನಾಚರಣೆ ಹಾಗೂ ಗೆಳೆಯರ ಬಳಗ ಕಾರಂತ ಪುರಸ್ಕಾರ -೨೦೨೬ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಕಾರಂತ ಅಧ್ಯಕ್ಷತೆ ವಹಿಸಿದ್ದರು.

ಕಲ್ಕೂರ ಪ್ರತಿಷ್ಠಾನದ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ ನಮ್ಮ ಬದುಕಿಗೆ ದಾರಿ ದೀಪವಾದ ಸಾಧಕರಲ್ಲಿ ಕೋಟ ಶಿವರಾಮ ಕಾರಂತರು ಓರ್ವರು. ಇತ್ತೀಚೆಗೆ ಎಲ್ಲರೂ ಶ್ರಮ ಜೀವನ ಮರೆತು ಸುಖದ ಭ್ರಮೆಯಲ್ಲೇ ಓಡುತ್ತಿದ್ದಾರೆ. ನಾವೆಲ್ಲರೂ ಸಂಸ್ಕಾರ ಮರೆತ ಕಾಲದಲ್ಲಿದ್ದೇವೆ. ಟೆಲಿಫೋನ್ ಮುಖಾಂತರ ತಂದೆಯ ಅಂತ್ಯಸಂಸ್ಕಾರದ ಬಗ್ಗೆ ಕೇಳುವ ಮಟ್ಟಕ್ಕೆ ಮಕ್ಕಳು ಬಂದಿರುವುದು ದುರಂತ. ಸಂಸ್ಕಾರ ಎಲ್ಲರಿಗೂ ಮುಖ್ಯ. ಕಾರಂತರು ಇದ್ದಿದ್ದರೆ ಇಂದಿನ ಶಿಕ್ಷಣದ ಬಗ್ಗೆ ದಾರಿ ತೋರಿಸುತ್ತಿದ್ದರು. ಶಿಕ್ಷಣ ಎಂದರೆ ಹಣ ಗಳಿಸುವ ಯಂತ್ರಗಳನ್ನಾಗಿ ಮಕ್ಕಳನ್ನು ಮಾಡುವಂತಹದ್ದಲ್ಲ. ಮುಂದಿನ ಜನಾಂಗ ಏನಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದರು.

ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳೀ ಕಡೇಕಾರ್ ಕಾರಂತರನ್ನು ಸ್ಮರಿಸುತ್ತಾ ಕಾರಂತರು ಸಮಯ ಪಾಲನೆಗೆ ಹಾಗೂ ಶಿಸ್ತಿಗೆ ಹೆಸರಾಗಿದ್ದರು. ನುಡಿ ಮತ್ತು ನಡೆಯಲ್ಲಿ ಸಾಮ್ಯತೆ ಹೊಂದಿದ್ದರು. ಅವರು ನಿಷ್ಠುರವಾದಿಯಾಗಿದ್ದರು. ಸತ್ಯದ ಬಗ್ಗೆ ಕಠೋರ ನಿಲುಮೆ ಹೊಂದಿದ್ದರು. ಕಾರಂತರು ಬದುಕಿನಲ್ಲಿ ಸತ್ಯ ಅಂತ ಕಂಡರೆ ಮಾತ್ರ ಒಪ್ಪುತ್ತಿದ್ದರು. ನನ್ನ ಬದುಕಿನಲ್ಲಿ ಕಾರಂತರು ಅಚ್ಚರಿಯ ವ್ಯಕ್ತಿಯಾಗಿದ್ದರು. ಕಾರಂತರಿಗೆ ಒಮ್ಮೆ ಪರಿಚಯವಾದಲ್ಲಿ ಸದಾ ಅವರನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು . ಬಾಲವನದಲ್ಲಿ ಅವರು ಮಾಡಿದ ಕಾರ್ಯಗಳು ಬೆರಗು ಹುಟ್ಟಿಸುವಂತೆ ಇದೆ. ಅಂದಿನ ಬೇರೆ ಸಾಹಿತಿಗಳಿಗೆ ಹೋಲಿಕೆ ಮಾಡಿದರೆ ಕಾರಂತರಿಗೆ ಸರಿಯಾದ ಮಾನ್ಯತೆ ಸಿಗಲಿಲ್ಲ. ಕಾರಂತರದ್ದು ಮಾತೃ ಹೃದಯವಾಗಿತ್ತು. ಸರಸ್ವತಿ ಆರಾಧಿಸಿದರು. ಹಣದ ಬಗ್ಗೆ ನಿರ್ಲಕ್ಷ ಹೊಂದಿದ್ದರು. ಪ್ರಶಸ್ತಿಗೆ ಹಪಹಪಿಸಿದವರಲ್ಲ. ಕಾರಂತರ ಬದುಕು ಬೆರಗು ಹುಟ್ಟಿಸುವಂತಹದ್ದು ಎಂದರು.


ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ( ರಿ.) ಅಧ್ಯಕ್ಷ ಎಸ್.ರಘುನಾಥ ರಾವ್, ವಂಡಾರಿನ ಕೃಷ್ಣಪ್ರಸಾದ್ ಕ್ಯಾಶ್ಯೂಸ್ ಮಾಲಕ ಸಂಪತ್ ಕುಮಾರ್ ಶೆಟ್ಟಿ, ಮೈಸೂರಿನ ವೈದ್ಯ ಪುಂಡಲೀಕ ಹೇರ್ಳೆ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ,
ಯಕ್ಷಗಾನ ವಿಮರ್ಶಕ ಡಾ ಜಗದೀಶ್ ಶೆಟ್ಟಿ ಸಿದ್ದಾಪುರ, ಕರ್ನಾಟಕ ಬ್ಯಾಂಕ್ ನ ಮಂಗಳೂರು ಇದರ ಮ್ಯಾನೇಜರ್ ಗೋಪಾಲಕೃಷ್ಣ ಸಾಮಗ ಬೆಳ್ಳೆ,
ಮಂಗಳೂರಿನ ಕಲಾ ಸಾಹಿತಿ ಜನಾರ್ದನ ಹಂದೆ ವೇದಿಕೆಯಲ್ಲಿದ್ದು ಶುಭ ಕೋರಿದರು.
ರಾಮ ಮೊಗವೀರರಿಗೆ ಕಾರಂತ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಮ ಮೊಗವೀರ ಮಾತನಾಡಿ ಕಾರಂತರು ಅವರ ಮನೆಯಲ್ಲಿ ಅವರ ಮಕ್ಕಳಂತೆ ನನ್ನನ್ನು ನೋಡಿಕೊಂಡಿದ್ದಾರೆ ಎಂದರು.
ಮಂಜುನಾಥ ಉಪಾಧ್ಯ ಸನ್ಮಾನಪತ್ರ ವಾಚಿಸಿದರು. ಚಂದ್ರಶೇಖರ ನಾವುಡ ಉಲ್ಲಾಸ್ ಕಾರಂತರ ಸಂದೇಶ ವಾಚಿಸಿದರು. ಗೆಳೆಯರ ಬಳಗದ ಅಧ್ಯಕ್ಷ ತಾರನಾಥ ಹೊಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಬಳಗದ ಕಾರ್ಯದರ್ಶಿ ನಾಗರಾಜ ಉಪಾದ್ಯ ವಂದಿಸಿದರು. ಶಶಿಧರ ಮಯ್ಯ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page