*ವರದಿ : ಚಿತ್ತೂರು ಪ್ರಭಾಕರ ಆಚಾರ್ಯ, * ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಅ.೩೦: ಮಾಣಿಕ್ಯ ಕ್ರಿಕೆಟರ್ಸ್ ನೀಲಾವರ ಸಂಸ್ಥೆಯ ೨೦ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಮಾಣಿಕ್ಯ ಪ್ರೀಮಿಯರ್ ಲೀಗ್ ವಿಶ್ವಕರ್ಮ ಟ್ರೋಫಿ -೨೦೨೬ ಪಂದ್ಯಾಟದ ಉದ್ಘಾಟನಾ ಸಮಾರಂಭವು ನೀಲಾವರ ಕ್ರಾಸ್‌ನ ಹೆಬ್ಬೆಲಸಿನ ಕಟ್ಟೆ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಚೇರ್ಕಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ನಾರಾಯಣ ನಾಯ್ಕ್, ಇಂದಿನ ಯುವಜನತೆಯನ್ನು ಕ್ರೀಡಾರಂಗದಲ್ಲಿ ಕ್ರಿಕೆಟ್ ಅಪಾರವಾಗಿ ಆಕರ್ಷಿಸಿದೆ. ಹೀಗಾಗಿ ಕ್ರಿಕೆಟ್‌ಗೆ ಸದಾ ಹೆಚ್ಚಿನ ಬೇಡಿಕೆಯಿದೆ. ಆದರೆ ತಂಡವನ್ನು ಕಟ್ಟಿಕೊಂಡು ಬೆಳೆಯುವ ಯುವಕರು ಕೇವಲ ಆಟಕ್ಕೆ ಮಾತ್ರ ಸೀಮಿತವಾಗದೆ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಳ್ಳಬೇಕು. ಮಾಣಿಕ್ಯ ಕ್ರಿಕೆಟರ್ಸ್ ತಂಡದ ಸದಸ್ಯರು ಕ್ರಿಕೆಟ್ ಜೊತೆಗೆ ಸಾಮಾಜಿಕ ಚಟುವಟಿಕೆಗಳು ಹಾಗೂ ಬಡವರ ನೆರವಿಗೆ ಸ್ಪಂದಿಸುತ್ತಿರುವುದು ಅತ್ಯಂತ ಶ್ಲಾಘನೀಯ, ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಮಾಣಿಕ್ಯ ಕ್ರಿಕೆಟರ್ಸ್ ನೀಲಾವರ ಇದರ ಅಧ್ಯಕ್ಷ ರಾಘವೇಂದ್ರ ಆಚಾರ್ಯ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆರೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜೀವ ಕುಲಾಲ್ ಮಾತನಾಡಿ, ಅಗಲಿದ ಕ್ರಿಕೆಟ್ ಸ್ನೇಹಿತ ಪ್ರದೀಪ್ ಆಚಾರ್ಯ ಅವರ ನೆನಪಿನಲ್ಲಿ ಈ ಕೂಟವನ್ನು ಆಯೋಜಿಸಿ, ಬಂದ ಉಳಿಕೆ ಮೊತ್ತವನ್ನು ಅವರ ಕುಟುಂಬಕ್ಕೆ ನೀಡಲು ಮುಂದಾಗಿರುವ ಮಾಣಿಕ್ಯ ಕ್ರಿಕೆಟರ್ಸ್ ಸದಸ್ಯರ ಸತ್ಕಾರ್ಯ ಮಾದರಿಯಾದುದು, ಎಂದರು.

ಮತ್ತೋರ್ವ ಅತಿಥಿ, ತೆಂಕನಡಿಯೂರು ವಲಯ ಗರಡಿ ಮಜಲು ಗುರು ಸೇವಾ ಪರಿಷತ್ ಗೌರವಾಧ್ಯಕ್ಷ ದಯಾನಂದ ಆಚಾರ್ಯ ಮಾತನಾಡಿ, ವಿಶ್ವಕರ್ಮ ಸಮಾಜದ ಯುವಕರು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಇನ್ಮುಂದೆಯೂ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು, ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಆರೂರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಗುರುರಾಜರಾವ್ ಆರೂರು, ಬೀಜಾಡಿ ವಿಲಾಶ್ ಮಾರ್ಬಲ್ಸ್ ಮಾಲಕ ರಮೇಶ್ ಆಚಾರ್ಯ ನೇರಂಬಳ್ಳಿ, ಬೆಂಗಳೂರಿನ ಮಾರುತಿ ಫರ್ನಿಚರ್ ಮಾಲಕ ನಾಗರಾಜ ಆಚಾರ್ಯ, ಶ್ರೀರಾಮ್ ರೋಡ್‌ಲೈನ್ಸ್ ಮಾಲಕ ರಮೇಶ್ ಪೂಜಾರಿ ನೀಲಾವರ ಹಾಗೂ ಚೈತನ್ಯ ಯುವಕ ಮಂಡಲದ ಅಧ್ಯಕ್ಷ ಶ್ಯಾಮರಾಜ್ ಆಚಾರ್ಯ ನೀಲಾವರ ಉಪಸ್ಥಿತರಿದ್ದರು.

ಸೀತಾಲಕ್ಷ್ಮೀ ರಾಜೇಶ್ ಆಚಾರ್ಯ ಪ್ರಾರ್ಥಿಸಿದರು. ಗಣೇಶ್ ಆಚಾರ್ಯ ಸ್ವಾಗತಿಸಿ, ರಾಜೇಶ್ ಆಚಾರ್ಯ ವಂದಿಸಿದರು. ಶಿವನಾರಾಯಣ ಕೋಟ ಕಾರ್ಯಕ್ರಮ ನಿರೂಪಿಸಿದರು


