udupimitra.in
  • November 23, 2026
  • Last Update November 22, 2026 5:59 pm
  • Brahmavara

ಕಿಶೋರ ಯಕ್ಷಗಾನ ಸಂಭ್ರಮ-2026: ಯಕ್ಷಗಾನ ಕಲೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ – ಮುರಳಿ ಕಡೇಕಾರ್

ಕಿಶೋರ ಯಕ್ಷಗಾನ ಸಂಭ್ರಮ-2026: ಯಕ್ಷಗಾನ ಕಲೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ – ಮುರಳಿ ಕಡೇಕಾರ್

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಬ್ರಹ್ಮಾವರ: ಯಕ್ಷಗಾನ ವೇಷ ಧರಿಸಿ ಪ್ರದರ್ಶನ ನೀಡುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ; ಇಂದು ವಿದ್ಯಾರ್ಥಿಗಳು ಇನ್ನೊಬ್ಬರಿಗೂ ಹೇಳಿಕೊಡುವ ಮಟ್ಟಿಗೆ ಕಲಾ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ ಎಂದು ಯಕ್ಷಗಾನ ಕಲಾರಂಗದ ಮುರಳಿ ಕಡೇಕಾರ್ ಅಭಿಪ್ರಾಯಪಟ್ಟರು.

ಬ್ರಹ್ಮಾವರ ಬಂಟರ ಭವನದ ಎದುರು ಉಡುಪಿಯ ಯಕ್ಷಗಾನ ಶಿಕ್ಷಣ ಟ್ರಸ್ಟ್ (ರಿ.), ಬ್ರಹ್ಮಾವರ ಪ್ರದರ್ಶನ ಸಂಘಟನಾ ಸಮಿತಿ ಹಾಗೂ ಉಡುಪಿಯ ಯಕ್ಷಗಾನ ಕಲಾರಂಗ (ರಿ.) ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಕಿಶೋರ ಯಕ್ಷಗಾನ ಸಂಭ್ರಮ-೨೦೨೬ ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನ ಸಂಭ್ರಮದಲ್ಲಿ ಒಟ್ಟು ೧೪ ಶಾಲೆಗಳ ೪೮೫ ಮಕ್ಕಳು ಪಾಲ್ಗೊಂಡಿದ್ದು, ಈ ಪೈಕಿ ೩೨೧ ಹುಡುಗಿಯರು ಹಾಗೂ ೧೬೪ ಹುಡುಗರು ಬಣ್ಣ ಹಚ್ಚಿದ್ದಾರೆ. ಹುಡುಗಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದನ್ನು ಉಲ್ಲೇಖಿಸಿದ ಅವರು, ನಮ್ಮ ಹುಡುಗರು ಯಾಕೆ ಹಿಂದೆ ಬೀಳುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದರು. ವಿಶೇಷವೆಂದರೆ, ಈ ಬಾರಿ ಹೊರ ಜಿಲ್ಲೆಗಳ ೭೮ ಮಕ್ಕಳು, ಹೊರ ರಾಜ್ಯದ ಓರ್ವ ವಿದ್ಯಾರ್ಥಿ, ಕ್ರಿಶ್ಚಿಯನ್ ಸಮುದಾಯದ ನಾಲ್ವರು ಹಾಗೂ ಮುಸ್ಲಿಂ ಸಮುದಾಯದ ಇಬ್ಬರು ವಿದ್ಯಾರ್ಥಿಗಳು ಯಕ್ಷಗಾನ ವೇಷ ಧರಿಸಿ ಸೌಹಾರ್ದತೆ ಮತ್ತು ಕಲಾಪ್ರೇಮ ಮೆರೆದಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಾರಂಭದಲ್ಲಿ ಪ್ರದರ್ಶನ ಸಂಘಟನಾ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹಂದಾಡಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಅಜಪುರ ಕರ್ನಾಟಕ ಸಂಘದ ಅಧ್ಯಕ್ಷ ಹಾರಾಡಿ ನಿತ್ಯಾನಂದ ಶೆಟ್ಟಿ, ನ್ಯೂ ಕರ್ನಾಟಕ ಬಿಲ್ಡರ್ಸ್ & ಡೆವಲಪರ್ಸ್ ಮಾಲೀಕ ಚೇತನ್ ಕುಮಾರ್ ಶೆಟ್ಟಿ, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಮೇಜರ್ ಬಾಲಕೃಷ್ಣ ಶೆಟ್ಟಿ, ಬ್ರಹ್ಮಾವರ ರೋಟರಿ ರಾಯಲ್ ಅಧ್ಯಕ್ಷ ಉಮಾಶಂಕರ ಶೆಟ್ಟಿ, ಪ್ರದರ್ಶನ ಸಂಘಟನಾ ಸಮಿತಿ ಕಾರ್ಯದರ್ಶಿ ದೇವಾನಂದ ನಾಯಕ್ ಮಾತನಾಡಿ ವಿದ್ಯಾರ್ಥಿಗಳ ಕಲಾ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
 ಇದೇ ಸಂದರ್ಭದಲ್ಲಿ ವೇಷ ಧರಿಸಿದ್ದ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು ಹಾಗೂ ಭಾಗವಹಿಸಿದ ಶಾಲೆಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಪ್ರದರ್ಶನ ಸಂಘಟನಾ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿಯವರನ್ನು ಕಲಾರಂಗದ ವತಿಯಿಂದ ಗೌರವಿಸಲಾಯಿತು. 
 ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರದರ್ಶನ ಸಂಘಟನಾ ಸಮಿತಿ ಖಜಾಂಚಿ ಶೋಭಾ ಪೂಜಾರಿ ವಂದಿಸಿದರು.
administrator

Related Articles

Leave a Reply

Your email address will not be published. Required fields are marked *

You cannot copy content of this page