ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಉಡುಪಿ, ಜು.೨೫:
ಪ್ರಜಾಪ್ರಭುತ್ವದ ಅಡಿಪಾಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIಖ-೨೦೨೬) ಕಾರ್ಯದಲ್ಲಿ ದೋಷರಹಿತ ಹಾಗೂ ಗುಣಮಟ್ಟದ ಮತದಾರರ ಪಟ್ಟಿಯನ್ನು ಯಾವುದೇ ಗೊಂದಲಗಳಿಲ್ಲದೆ ಸಿದ್ಧಪಡಿಸುವಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸೂಚನೆ ನೀಡಿದರು. ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಮ್ಯಾಪಿಂಗ್ ಆಗದವರಿಗೂ ಅವಕಾಶ:
ರಾಜ್ಯದಲ್ಲಿ ನಡೆಯುತ್ತಿರುವ ಎಸ್.ಐ.ಆರ್ ಮನೆ ಮನೆ ಸಮೀಕ್ಷೆಯ ನಮೂನೆಗಳಲ್ಲಿ, ೨೦೦೨ರ ಮತದಾರರ ಪಟ್ಟಿಯಲ್ಲಿ ಮ್ಯಾಪಿಂಗ್ ಆಗದವರು ಸಹ ತಮ್ಮ ವೈಯಕ್ತಿಕ ವಿವರಗಳನ್ನು ಎನ್ಯೂಮರೇಷನ್ ಫಾರ್ಮ್ನ ಕೊನೆಯ ಕಾಲಂನಲ್ಲಿ ಭರ್ತಿ ಮಾಡಿ ಬಿ.ಎಲ್.ಒ ಗಳಿಗೆ ನೀಡಬಹುದಾಗಿದೆ. ಒಂದೊಮ್ಮೆ ಬಿ.ಎಲ್.ಒ ಗಳು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರು ಸ್ಥಳದಲ್ಲೇ ಇಲ್ಲದಿದ್ದರೆ, ಅವರ ಪರವಾಗಿ ಕುಟುಂಬದ ಯಾವುದೇ ಒಬ್ಬ ವಯಸ್ಕ ಸದಸ್ಯರು ಸಹಿ ಹಾಕಿ ಗಣತಿ ನಮೂನೆಗಳನ್ನು ಸಲ್ಲಿಸಬಹುದು ಎಂದು ವಿ. ಅನ್ಬುಕುಮಾರ್ ಸ್ಪಷ್ಟಪಡಿಸಿದರು. ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಂದ ಪಡೆದುಕೊಂಡ ಎನುಮರೇಶನ್ ಫಾರಂಗಳ ಡಿಜಿಟಲೀಕರಣ ಕಾರ್ಯದಲ್ಲಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಮುಖ್ಯ ಚುನಾವಣಾಧಿಕಾರಿಗಳು ಜಿಲ್ಲಾಡಳಿತದ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು

.
ಉಡುಪಿಯಲ್ಲಿ ಶೇ. ೮೮.೩೯ ರಷ್ಟು ಡಿಜಿಟಲೀಕರಣ ಪೂರ್ಣ:
ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ., ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIಖ-೨೦೨೬) ಪ್ರಕ್ರಿಯೆಯು ವ್ಯವಸ್ಥಿತವಾಗಿ ನಡೆಯುತ್ತಿದ್ದು, ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸುವ ಪ್ರಕ್ರಿಯೆಯಲ್ಲಿ ಶೇ. 100 ಪ್ರಗತಿ ಸಾಧಿಸಿದ್ದಾರೆ. ಜುಲೈ ೨೫ರ ಸಂಜೆ ೪ ಗಂಟೆಯವರೆಗೆ ಒಟ್ಟು 9,40,340 ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಶೇ. 88.39 ರಷ್ಟು ಪ್ರಗತಿಯಾಗಿದೆ ಎಂದರು.ಮನೆ ಭೇಟಿಯ ವೇಳೆ 14,835 ಮತದಾರರು ಮೃತಪಟ್ಟಿರುವುದು, 14,426 ಮತದಾರರು ಖಾಯಂ ಆಗಿ ಬೇರೆಡೆಗೆ ವರ್ಗಾವಣೆಯಾಗಿರುವುದು ಕಂಡುಬಂದಿದ್ದು, 5,225 ಮತದಾರರು ಸೂಕ್ತ ದಾಖಲಾತಿಗಳನ್ನು ಒದಗಿಸಿದ್ದಾರೆ ಎಂದು ಅವರು ಸಭೆಗೆ ವಿವರಿಸಿದರು.

ಸಾಧಕ ಬಿಎಲ್ಒಗಳಿಗೆ ಸನ್ಮಾನ:
ಡಿಜಿಟಲೀಕರಣ ಕಾರ್ಯವನ್ನು ಶೇ. 100ರಷ್ಟು ಪೂರ್ಣಗೊಳಿಸಿದ ವಿವಿಧ ಕ್ಷೇತ್ರಗಳ ಬೂತ್ ಮಟ್ಟದ ಅಧಿಕಾರಿಗಳನ್ನು (BLO)) ಇದೇ ಸಂದರ್ಭದಲ್ಲಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು:
ಬೈಂದೂರು (ಮತಗಟ್ಟೆ 125): ಪವಿತ್ರ ಪೂಜಾರಿ,
ಕುಂದಾಪುರ (ಮತಗಟ್ಟೆ 135): ಲಕ್ಷ್ಮೀ ಶೆಡ್ತಿ, ಉಡುಪಿ (ಮತಗಟ್ಟೆ 33): ಪ್ರಸನ್ನಿ,
ಕಾಪು (ಮತಗಟ್ಟೆ 190): ಹೇಮಾ ಪೂಜಾರ್ತಿ,
ಕಾರ್ಕಳ (ಮತಗಟ್ಟೆ 41): ಜ್ಯೋತಿರಾವ್ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಸಹಾಯಕ ಕಮಿಷನರ್ ರಶ್ಮಿ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು



