• May 7, 2026
  • Last Update May 6, 2026 5:12 pm
  • Brahmavara

ಬಾರಕೂರು ಗತವೈಭವಕ್ಕೆ ಮರಳಬೇಕು, ಸಮಿತಿ ರಚಿಸಿ ಕಾರ್ಯಯೋಜನೆ – ಸಚಿವ ಎಚ್.ಕೆ.ಪಾಟೀಲ್

ಬಾರಕೂರು ಗತವೈಭವಕ್ಕೆ ಮರಳಬೇಕು, ಸಮಿತಿ ರಚಿಸಿ ಕಾರ್ಯಯೋಜನೆ – ಸಚಿವ ಎಚ್.ಕೆ.ಪಾಟೀಲ್

ಉಡುಪಿ ಮಿತ್ರ ಪತ್ರಿಕೆ ಸುದ್ಧಿ:
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಬ್ರಹ್ಮಾವರ, ಮೇ೬: ಕರ್ನಾಟಕ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು ಇತಿಹಾಸವನ್ನು ನೆನಪಿಸಿಕೊಳ್ಳುವುದು ಮತ್ತು ಇತಿಹಾಸ ಹೇಳುವ ಪ್ರತಿಯೊಂದು ಕಲ್ಲನ್ನೂ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು. ಇತಿಹಾಸ ಮರೆಯಾಗುತ್ತಿರುವುದು ವಿಷಾದನೀಯವಾಗಿದ್ದು, ಜವಾಬ್ದಾರಿ ಹೊಂದಿರುವವರು ಅದರ ಉಳಿವಿಗೆ ಹೆಚ್ಚು ಗಮನ ಕೊಡುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.


ಅವರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮೇ.6ರಂದು ನಡೆದ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಾರಕೂರು ಒಂದು ಕಾಲದಲ್ಲಿ ರಾಜ್ಯವಾಗಿದ್ದು, ಅಳುಪ ವಂಶದ ಸಮೃದ್ಧ ಇತಿಹಾಸವನ್ನು ಹೊಂದಿದೆ. ೧೧೦೦ ವರ್ಷಗಳ ಕಾಲ ಆಡಳಿತ ನಡೆಸಿದ ರಾಜರನ್ನು ನಾವು ನೆನಪಿಸಿಕೊಳ್ಳಬೇಕು ಎಂದು ಹೇಳಿದರು. ಮುಂದಿನ ಪೀಳಿಗೆಗೆ ಬಾರಕೂರಿನ ವೈಭವವನ್ನು ಪರಿಚಯಿಸುವ ವ್ಯವಸ್ಥೆ ಮಾಡಬೇಕಾಗಿದೆ ಎಂದರು.
ಲಕ್ಕುಂಡಿಯಲ್ಲಿ 101 ದೇವಸ್ಥಾನಗಳಿದ್ದು, ಅವುಗಳಲ್ಲಿ ಅನೇಕವನ್ನು ಗುರುತಿಸಿ ಅಭಿವೃದ್ಧಿ ಮಾಡಲಾಗುತ್ತಿದೆ. ಅಲ್ಲಿನ 35 ಬಾವಿಗಳನ್ನು ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.


ಜಗದೀಶ್ ಶೆಟ್ಟಿಯವರ ನೇತೃತ್ವದಲ್ಲಿ ಸಮಿತಿ ರಚಿಸಿ, ಆ ಸಮಿತಿಯಿಂದ ಕಾರ್ಯಯೋಜನೆ ವರದಿ ಪಡೆಯಲಾಗುವುದು. ಉತ್ಖನನ, ಸಂರಕ್ಷಣೆ ಹಾಗೂ ಅಭಿವೃದ್ಧಿ ನಿರ್ವಹಣೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಬಾರಕೂರಿನ ಮೂಲ ಸ್ವರೂಪವನ್ನು ಉಳಿಸಿಕೊಂಡು ಅದರ ಗತವೈಭವವನ್ನು ಮರುಕಳಿಸುವ ಕೆಲಸ ಆಗಬೇಕು ಎಂದರು.


ಕರಾವಳಿ ಜಿಲ್ಲೆಗಳು ಪ್ರವಾಸೋದ್ಯಮಕ್ಕೆ ದೊಡ್ಡ ಕೊಡುಗೆ ನೀಡಿವೆ ಎಂದು ಅವರು ಹೇಳಿದರು. ಗದಗದಿಂದ ಹೊರಡುವ ಪ್ರವಾಸಿಗರು ಶಿರಸಿಗೆ ಬಂದು, ನಂತರ ಇಡಗುಂಜಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಉಡುಪಿ ಶ್ರೀಕೃಷ್ಣ ಮಠ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಸಾದ ಸ್ವೀಕರಿಸುತ್ತಾ ಕಡಿಮೆ ಖರ್ಚಿನಲ್ಲಿ ಭಕ್ತಿಪರ ಪ್ರವಾಸ ಮಾಡಬಹುದು. ಇಂತಹ ಪ್ರವಾಸ ಮಾರ್ಗದಲ್ಲಿ ಬಾರಕೂರನ್ನೂ ಸೇರಿಸಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಶಾಂತಾರಾಮ ಶೆಟ್ಟಿ, ಅಳುಪ ಮನೆತನದ ಡಾ. ಆಕಾಶ್ ಜೈನ್, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ ಸಚಿವರನ್ನು ಭೇಟಿಯಾದಾಗ ಬಾರಕೂರಿನ ಸಮಗ್ರ ಅಭಿವೃದ್ಧಿಗೆ ಭರವಸೆ ನೀಡಿದ್ದರು. ಇಂದು ಅವರು ಸ್ಥಳಕ್ಕೆ ಭೇಟಿ ನೀಡಿ, ಇಲ್ಲಿನ ಇತಿಹಾಸದ ಮಾಹಿತಿ ಪಡೆದುಕೊಂಡು ಕೋಟೆ, ಕೆರೆಗಳು, ಇಕ್ಕಟ್ಟಾದ ರಸ್ತೆಗಳು ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಸ್ವತಃ ಪರಿಶೀಲನೆ ನಡೆಸಿದರು. ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.


ಪತ್ರಕರ್ತ ವಸಂತ ಗಿಳಿಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಬಾರಕೂರಿನ ಇತಿಹಾಸದ ಸಾಕ್ಷ್ಯಗಳನ್ನು ಉಳಿಸುವ ಕೆಲಸವನ್ನು ಇಲಾಖೆಯ ಅಧಿಕಾರಿಗಳು ಸರಿಯಾಗಿ ಮಾಡುತ್ತಿಲ್ಲ. ಬಾರಕೂರನ್ನು ವಿಜಯನಗರಕ್ಕೆ ಹೋಲಿಕೆ ಸರಿಯಲ್ಲ. ವಿಜಯ ನಗರ ಇತ್ತೀಚೆನದ್ದು. ಬಾರಕೂರು ಪುರಾತನವಾದ ಬಂದರು ನಗರಿಯಾಗಿತ್ತು. ಒಂದೂವರೆ ಸಾವಿರ ವರ್ಷಗಳ ಕಾಲ ಅಳುಪರೇ ಇದನ್ನು ಆಳಿದ್ದರು. ಪುರಾತತ್ವ ಇಲಾಖೆ ಸರಿಯಾಗಿ ಕೆಲಸವನ್ನೇ ಮಾಡುತ್ತಿಲ್ಲ. ಅಳುಪೋತ್ಸವ ಮಾಡಿ ಮಾಡಲು ಜೆಸಿಬಿ ತಂದು ಅಗೆದು ಹಾಕಿದರು. ಅಮೂಲ್ಯ ಸಂಪತ್ತು ನಾಶವಾಯಿತು. ಒಂದಷ್ಟು ನೃತ್ಯ ತಂಡಗಳನ್ನು ಕರೆಸಿ ನೃತ್ಯ ಮಾಡಿಸಿದರು. ಅದನ್ನು ಅಳುಪೋತ್ಸವ ಎಂದರು. ನಮಗೆ ಅಂತಹ ಉತ್ಸವ ಬೇಡ. ನಮಗೆ ಬಾರಕೂರನ್ನು ಸಂರಕ್ಷಿಸುವ ಕೆಲಸವಾಗಬೇಕು. ಇಲ್ಲಿ ೧೨ ಕೆರೆಗಳಿವೆ, ೧೨ ಕೇರಿಗಳಿವೆ. ಇದೆಲ್ಲವನ್ನೂ ಉಳಿಸುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದ ಅಂತ್ಯದಲ್ಲಿ ರಾಮಚಂದ್ರ ಕಾಮತ್ ವಂದಿಸಿದರು. ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸುವ ಮೊದಲು ಚೌಳಿಕರೆ, ಕತ್ತಲೆ ಬಸದಿ, ಕೋಟೆ, ಬಟ್ಟೆವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಸುದೀರ್ಘ ಚರ್ಚೆ ಮಾಡಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page