ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಉಡುಪಿ ಅ.೧ ಚಿನ್ನದ ಕೆಲಸಗಾರರು ಸಮಸ್ಯೆಯಲ್ಲಿದ್ದಾರೆ. ದೇಶದಲ್ಲಿ ಡಾಲರ್ ಸಮಸ್ಯೆಯಿಂದ ಚಿನ್ನ ಆಮದು ಮಾಡಿಕೊಳ್ಳಲಾಗುತ್ತಿಲ್ಲ. ಆ ಕಾರಣದಿಂದ ಪ್ರಧಾನಿಯವರು ಚಿನ್ನ ಖರೀದಿ ಸ್ವಲ್ಪ ಸಮಯ ಮುಂದೂಡಿ ಎಂದಿದ್ದರು. ೧೯೬೭-೬೮ ರಲ್ಲಿ ಗೋಲ್ಡ್ ಕಂಟ್ರೋಲ್ ಆಕ್ಟ್ ಬಂದಿತ್ತು. ಆಗಲೂ ಇದೇ ರೀತಿ ತೊಂದರೆಯಾಗಿತ್ತು. ಆಗ ಕರ್ನಾಟಕ ಸರಕಾರ ನಮ್ಮ ನೆರವಿಗೆ ಬಂತು. ಈಗಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಚಿನ್ನದ ಕೆಲಸಗಾರರ ನೆರವಿಗೆ ಬರಬೇಕು ಎಂದು ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಪಿ.ಸುಜ್ಞಾನಮೂರ್ತಿ ನುಡಿದರು.

ಅವರು ಉಡುಪಿ ಕುಂಜಿಬೆಟ್ಟು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ರಜತ ಮಹೋತ್ಸವದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕೆಜಿಎಫ್ ಚಿನ್ನದ ಗಣಿಯನ್ನು ಕೇಂದ್ರದ ಕೈಗಾರಿಕ ಮಂತ್ರಿ ಕುಮಾರ ಸ್ವಾಮಿ ಪುನರ್ ಆರಂಭಿಸಬೇಕು. ಆರಂಭವಾದಲ್ಲಿ ಒಂದಷ್ಟು ಚಿನ್ನ ಇಲ್ಲಿಯೇ ಸಿಗಲಿದೆ. ರಾಜ್ಯ ಸರ್ಕಾರದ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ ಹಣ ಇಲ್ಲ. ಮುಖ್ಯಮಂತ್ರಿಗಳು ೩ ತಿಂಗಳು ಕಾಯಲು ಹೇಳಿದ್ದು ಅನುದಾನ ನೀಡಲಿದ್ದೇನೆ ಎಂದು ಹೇಳಿದ್ದಾರೆ. ಅವರು ನಿಗಮಕ್ಕೆ ಹಣ ಕೊಟ್ಟರೆ ಚಿನ್ನಬೆಳ್ಳಿ ಕೆಲಸಗಾರರ ಬೇಡಿಕೆಗೆ ನಿಗಮದ ವತಿಯಿಂದ ಸಹಕಾರ ನೀಡಲಿದ್ದೇನೆ.

ಚಿನ್ನ ಬೆಳ್ಳಿ ವ್ಯವಹಾರದಲ್ಲಿ ಹೆಚ್ಚಿನ ಜಿಎಸ್ ಟಿ ಸಂಗ್ರಹ ಆಗುವುದರಿಂದ ಕೇಂದ್ರ ಸರಕಾರ ಅಲ್ಪ ಪ್ರಮಾಣವಾದರೂ ನಮಗೆ ಕೊಡಬೇಕು. ರಾಜ್ಯ ಸರ್ಕಾರದಿಂದಲೂ ಸಹಕಾರ ಸಿಗುವಂತಾಗಬೇಕು ಎಂದು ನುಡಿದರು.
ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ ರಾಜ ಮಹರಾಜರ ಕಾಲದಿಂದಲೂ ವಿಶ್ವಕರ್ಮ ಸಮುದಾಯ ಗೌರವದಿಂದ ಬದುಕಿ ಬಂದ ಸಮುದಾಯ. ದೇವರು ವರವಾಗಿ ಈ ಸಮುದಾಯಕ್ಕೆ ವೃತ್ತಿಯನ್ನು ನೀಡಿದ್ದಾನೆ. ಆದರೆ ಪ್ರಸ್ತುತ ಈ ಚಿನ್ನ ಬೆಳ್ಳಿ ಕೆಲಸಗಾರರು ಸಮಸ್ಯೆ ಎದುರಿಸುತ್ತಿದ್ದು ಸರಕಾರ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡಬೇಕು. ನಾನು ಕೂಡ ನಮ್ಮ ನಾಯಕರ ಗಮನ ಸೆಳೆಯಲಿದ್ದೇನೆ ಎಂದರು.

ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಾಳಿ ಮಾತನಾಡಿ ಚಿನ್ನ ಬೆಳ್ಳಿ ಕೆಲಸಗಾರರ ಸಂಘ ರಜತ ಮಹೋತ್ಸವದ ವರ್ಷದಲ್ಲಿರುವುದರಿಂದ ಈ ಬಾರಿ ವಿವಿಧ ಸಮಿತಿಗಳನ್ನು ರಚಿಸಿಕೊಂಡು ಡಿಸೆಂಬರ್‌ನಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಸಲು ತೀರ್ಮಾನಿಸಿದ್ದು ಎಲ್ಲರೂ ಇದಕ್ಕೆ ಸಹಕಾರ ನೀಡಬೇಕೆಂದು ಕೋರಿದರು.

ವೇದಿಕೆಯಲ್ಲಿ ಸಂಘದ ಕಾನೂನು ಸಲಹೆಗಾರ ಗಂಗಾಧರ ಎಚ್.ಎಂ., ಸಂಘದ ಗೌರವಾಧ್ಯಕ್ಷ ಬಾಲಕೃಷ್ಣ ಆಚಾರ್ಯ ಕಪ್ಪೆಟ್ಟು, ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಬಿ.ಕುಶ ಕುಮಾರ್, ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಎಂ.ರಮೇಶ ಆಚಾರ್ಯ, ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ಗಾಯತ್ರಿ ಕಲ್ಯಾಣ ಮಂಟಪ ಉಡುಪಿ ಇದರ ಅಧ್ಯಕ್ಷ ಕೆ.ವಿಶ್ವನಾಥ ಆಚಾರ್ಯ ಉಪಸ್ಥಿತರಿದ್ದು ಶುಭ ಹಾರೈಸಿ ಮಾತನಾಡಿದರು.

ಪಿ.ಸುಜ್ಞಾನಮೂರ್ತಿ ರಜತ ಸಂಭ್ರಮದ ಲಾಂಛನ ಬಿಡುಗಡೆ ಮಾಡಿದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.
ಕಾರ್ಯದರ್ಶಿ ರಘುನಾಥ ಆಚಾರ್ಯ ವರದಿ ವಾಚಿಸಿದರು. ಕೋಶಾಧಿಕಾರಿ ದಿವಾಕರ ವಿ.ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಟಿ.ಜಿ.ಪ್ರಭಾಕರ ಆಚಾರ್ಯ ನೂತನ ಪದಾಧಿಕಾರಿಗಳ ಪಟ್ಟಿಯನ್ನು ವಾಚಿಸಿದರು.

ಮಾಜಿ ಅಧ್ಯಕ್ಷ ಕಿಶೋರ್ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದ್ದು ಜಯಪ್ರಕಾಶ್ ಆಚಾರ್ಯ ಕುತ್ಪಾಡಿ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.
ಉಪಾಧ್ಯಕ್ಷ ಪ್ರಶಾಂತ್ ಆಚಾರ್ಯ ನೇಜಾರು ಸ್ವಾಗತಿಸಿದರು. ಸಂತೋಷ ಆಚಾರ್ಯ ಕೊಳಲಗಿರಿ ವಂದಿಸಿದ್ದು ಹರೀಶ್ ಆಚಾರ್ಯ ಉಪ್ಪೂರು ಕಾರ್ಯಕ್ರಮ ನಿರೂಪಿಸಿದರು.




