ಉಡುಪಿಮಿತ್ರ ಪತ್ರಿಕೆ ವೆಬ್‌ಸೈಟ್ ಸುದ್ಧಿ:
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಬೆಂಗಳೂರು, ಸೆ.೨೨: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗ್ರಾಮ ಮಟ್ಟದಲ್ಲಿ ಸಮರ್ಪಕ ಭೌತಿಕ ಸಮೀಕ್ಷೆ ನಡೆಸಿ, ಜನವಸತಿ ಪ್ರದೇಶ ಹಾಗೂ ಕೃಷಿ ಜಮೀನುಗಳನ್ನು ಹೊರತುಪಡಿಸಿ ಪರಿಸರ ಸೂಕ್ಷ್ಮ ಪ್ರದೇಶದ (ಇಎಸ್‌ಎ) ವ್ಯಾಪ್ತಿಯನ್ನು ನಿಗದಿಪಡಿಸಬೇಕು. ಬಳಿಕ ವಾಸ್ತವ ಸ್ಥಿತಿಗತಿಗಳ ಆಧಾರದ ಮೇಲೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರೆ ಮಾತ್ರ ಪಶ್ಚಿಮಘಟ್ಟ ಭಾಗದ ಜನರಲ್ಲಿರುವ ಆತಂಕ ಹಾಗೂ ಗೊಂದಲಕ್ಕೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್‌ಕುಮಾರ್ ಕೊಡ್ಗಿ ವಿಧಾನಸಭೆಯಲ್ಲಿ ಆಗ್ರಹಿಸಿದರು.

ಕಸ್ತೂರಿ ರಂಗನ್ ವರದಿಗೂ ಮುನ್ನ ೨೦೧೧ರಲ್ಲಿ ಮಾಧವ ಗಾಡ್ಗಿಳ್ ಸಮಿತಿ ವರದಿ ಸಲ್ಲಿಸಿತ್ತು. ಅದರ ವ್ಯಾಪ್ತಿಯಲ್ಲಿ ಸುಮಾರು ಶೇ.೭೫ರಷ್ಟು ಪ್ರದೇಶ ಒಳಗೊಂಡಿದ್ದ ಹಿನ್ನೆಲೆಯಲ್ಲಿ ಅದರ ತೀವ್ರತೆಯನ್ನು ಪರಿಗಣಿಸಿ ೧೦.೦೩.೨೦೧೪ರಂದು ಕಸ್ತೂರಿ ರಂಗನ್ ವರದಿಯ ಪ್ರಥಮ ಕರಡು ಅಧಿಸೂಚನೆ ಹೊರಡಿಸಲಾಯಿತು. ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ೩೫ ಗ್ರಾಮಗಳನ್ನು ಈ ವರದಿಯಲ್ಲಿ ಸೇರಿಸಲಾಗಿದೆ ಎಂದು ಅವರು ವಿವರಿಸಿದರು.
ಪಶ್ಚಿಮಘಟ್ಟದ ತಪ್ಪಲಿನ ಗ್ರಾಮಗಳಲ್ಲಿ ಜನಜೀವನ, ಕೃಷಿ ಹಾಗೂ ಅರಣ್ಯ ಪ್ರದೇಶಗಳು ಪರಸ್ಪರ ಬೆಸೆದುಕೊಂಡಿವೆ. ಜನವಸತಿ ಪ್ರದೇಶ ಹಾಗೂ ಅರಣ್ಯ ಪ್ರದೇಶವನ್ನು ವಾಸ್ತವ ಸ್ಥಿತಿಗತಿಗಳ ಆಧಾರದ ಮೇಲೆ ಪ್ರತ್ಯೇಕವಾಗಿ ಗುರುತಿಸದೆ ವರದಿ ಸಿದ್ಧಪಡಿಸಿರುವುದರಿಂದ ಜನರಲ್ಲಿ ಗೊಂದಲ ಉಂಟಾಗಿದೆ. ೨೦೧೪ರಲ್ಲಿ ವರದಿಯನ್ನು ತಿರಸ್ಕರಿಸಿ ಕೇಂದ್ರಕ್ಕೆ ಹಿಂದಿರುಗಿಸುವ ಬದಲು, ಗ್ರಾಮಗಳ ವಾಸ್ತವ ಪರಿಸ್ಥಿತಿ, ಕೃಷಿ ತೋಟಗಳು ಹಾಗೂ ಜನವಸತಿ ಪ್ರದೇಶಗಳ ಕುರಿತು ಭೌತಿಕ ಸಮೀಕ್ಷೆ ನಡೆಸಬೇಕಾಗಿತ್ತು ಎಂದು ಕೊಡ್ಗಿ ಹೇಳಿದರು.
ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಮೂಕಾಂಬಿಕಾ, ಸೋಮೇಶ್ವರ ಹಾಗೂ ಕುದುರೆಮುಖ ಅಭಯಾರಣ್ಯಗಳು ಒಳಗೊಂಡಿವೆ. ಈ ಪ್ರದೇಶಗಳಲ್ಲಿ ಈಗಾಗಲೇ ಪರಿಸರ ಸೂಕ್ಷ್ಮ ವಲಯ (ಇಕೋ ಸೆನ್ಸಿಟಿವ್ ಝೋನ್) ಜಾರಿಯಲ್ಲಿದ್ದು, ಅದರ ಪರಿಣಾಮವಾಗಿ ಜನರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಜನರು ತಮ್ಮ ಸ್ವಂತ ಮನೆ ನಿರ್ಮಾಣಕ್ಕೂ ಅನುಮತಿ ಪಡೆಯಲು ದೂರದ ಮೈಸೂರು ಮಟ್ಟದ ಸಮಿತಿಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಾಣಿಜ್ಯ ಉದ್ದೇಶದ ಭೂ ಪರಿವರ್ತನೆಗೂ ಹಲವು ನಿರ್ಬಂಧಗಳಿವೆ ಎಂದು ಅವರು ಸದನದ ಗಮನಕ್ಕೆ ತಂದರು.
ಇದಕ್ಕೂ ಹೆಚ್ಚಾಗಿ ಕಸ್ತೂರಿ ರಂಗನ್ ವರದಿಯಡಿ ಉಡುಪಿ ಜಿಲ್ಲೆಯ ೩೫ ಗ್ರಾಮಗಳನ್ನು ಸೇರಿಸಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಹಾಗೂ ಪರಿಸರ ಸೂಕ್ಷ್ಮ ವಲಯ (ಇಎಸ್‌ಝಡ್)ಗಳ ವ್ಯಾಪ್ತಿ ಮತ್ತು ನಿಯಮಗಳ ಕುರಿತು ಗ್ರಾಮೀಣ ಭಾಗದ ಜನರಿಗೆ ಸಮರ್ಪಕ ಮಾಹಿತಿ ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.
ಸೂಕ್ತ ಝೋನಲ್ ಮ್ಯಾನೇಜ್‌ಮೆಂಟ್ ಪ್ಲಾನ್ ಅಗತ್ಯ
ಇಎಸ್‌ಎ ವ್ಯಾಪ್ತಿಯಲ್ಲಿ ಸಮರ್ಪಕ ಝೋನಲ್ ಮ್ಯಾನೇಜ್‌ಮೆಂಟ್ ಪ್ಲಾನ್ ರೂಪಿಸಿ ಅನುಷ್ಠಾನಗೊಳಿಸಬೇಕು. ಕೃಷಿ ಜಮೀನು, ಅರಣ್ಯ ಪ್ರದೇಶ, ಜನವಸತಿ ಪ್ರದೇಶ ಹಾಗೂ ಅಭಿವೃದ್ಧಿಗೆ ಅವಕಾಶವಿರುವ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದಕ್ಕೆ ಮೊದಲು ಸಮಗ್ರ ಭೌತಿಕ ಸಮೀಕ್ಷೆ ನಡೆಸುವುದು ಅತ್ಯಗತ್ಯ ಎಂದು ಕೊಡ್ಗಿ ಒತ್ತಾಯಿಸಿದರು.
ಸುಮಾರು ೨೦,೦೦೦ ಚದರ ಕಿ.ಮೀ. ಪ್ರದೇಶವನ್ನು ಇಎಸ್‌ಎ ವ್ಯಾಪ್ತಿಗೆ ತರಲು ಪ್ರಸ್ತಾವಿಸಲಾಗಿದ್ದು, ರಾಜ್ಯದಲ್ಲಿರುವ ಸಂರಕ್ಷಿತ ಅರಣ್ಯ, ವನ್ಯಜೀವಿ ಪ್ರದೇಶ ಹಾಗೂ ಅಭಯಾರಣ್ಯಗಳನ್ನು ಒಳಗೊಂಡಂತೆ ಈಗಾಗಲೇ ಸುಮಾರು ೧೬,೦೦೦ ಚದರ ಕಿ.ಮೀ. ಪ್ರದೇಶ ಸಂರಕ್ಷಿತ ವ್ಯಾಪ್ತಿಯಲ್ಲಿದೆ. ಉಳಿದ ಪ್ರದೇಶವನ್ನು ಭೌತಿಕ ಸಮೀಕ್ಷೆಯ ಮೂಲಕ ಪರಿಶೀಲಿಸಿ, ನಿಜವಾಗಿಯೂ ಅಗತ್ಯವಿರುವ ಪ್ರದೇಶವನ್ನಷ್ಟೇ ಇಎಸ್‌ಎ ವ್ಯಾಪ್ತಿಗೆ ಸೇರಿಸಬೇಕು ಎಂದು ಅವರು ಹೇಳಿದರು.
ವನ್ಯಜೀವಿ ಹಾಗೂ ಮೀಸಲು ಅರಣ್ಯಗಳ ಗಡಿಗೆ ಸೀಮಿತವಾಗಿ ಬಫರ್ ಝೋನ್ ನಿಗದಿಪಡಿಸಿದರೆ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ತಕ್ಷಣ ಭೌತಿಕ ಸಮೀಕ್ಷೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕ ಕಿರಣ್‌ಕುಮಾರ್ ಕೊಡ್ಗಿ ವಿಧಾನಸಭೆಯಲ್ಲಿ ಆಗ್ರಹಿಸಿದರು.



