ವರದಿ: ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಚಿತ್ತೂರು, ಸೆ.೨೦.: ದೇವಾಲಯಗಳು ಭಕ್ತರಿಂದ ಬರುವ ಆದಾಯದ ಒಂದಷ್ಟು ಭಾಗವನ್ನು ಸಮಾಜಸೇವೆ ಹಾಗೂ ಜನರ ಆರೋಗ್ಯ ಸೇವೆಗೆ ವಿನಿಯೋಗಿಸುವುದರಿಂದ ದೇವಾಲಯಗಳು ಜನಸ್ನೇಹಿಯಾಗಿ ಬದಲಾಗಲಿವೆ. ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನವೂ ಇದೇ ಹಾದಿಯಲ್ಲಿ ಮುಂದುವರಿಯುತ್ತಿರುವುದು ಶ್ಲಾಘನೀಯ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ನುಡಿದರು. ಅವರು ಮಾರಣಕಟ್ಟೆಯಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಮಾರಣಕಟ್ಟೆ, ಡಿಪಾರ್ಟೆಂಟ್ ಆಫ್ ಕಮ್ಯೂನಿಟಿ ಮೆಡಿಸಿನ್, ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಅಂಡ್ ಡಿಪಾರ್ಟೆಂಟ್ ಆಫ್ ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ, ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್ ಸ್ಟ್ರೀಟ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು, ನಿಟ್ಟೆ ಯುನಿವರ್ಸಿಟಿ ಚಿತ್ತೂರು ಮಂಜಯ್ಯ ಶೆಟ್ಟಿ ಮೆಮೋರಿಯಲ್ ವೈದ್ಯಕೀಯ ಮತ್ತು ದಂತ ಆರೋಗ್ಯ ಕೇಂದ್ರ ಮಾರಣಕಟ್ಟೆ, ಚಿತ್ತೂರು, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ, ನ್ಯೂ ಮೆಡಿಕಲ್ ಸೆಂಟರ್ ಮತ್ತು ಶ್ರೀ ಸಾಯಿ ಆಸ್ಪತ್ರೆಯ ಡಾ| ರಂಜನ್ ಶೆಟ್ಟಿ ಇವರ ಸಹಯೋಗದಲ್ಲಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ನೂತನ ಆಸ್ಪತ್ರೆಯ ವೈದ್ಯಾಧಿಕಾರಿಗಳ, ಸಿಬ್ಬಂದಿಗಳ ವಿಶ್ರಾಂತಿ ಗೃಹ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ನಿರ್ದೇಶಕ ನಾಡೋಜ ಡಾ| ಕೃಷ್ಣ ಪ್ರಸಾದ್‌ಕೂಡ್ಲು ಮಾತನಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಉತ್ತಮ ದರ್ಜೆಯಲ್ಲಿ ಕಣ್ಣಿನ ಚಿಕಿತ್ಸೆ ಸಿಗುವಂತಾಗಬೇಕು. ಒಂದು ವೇಳೆ ಮಾರಣಕಟ್ಟೆಯಲ್ಲಿ ಕಣ್ಣಿನ ಚಿಕಿತ್ಸಾ ವಿಭಾಗ ತೆರೆಯಲು ಬಯಸಿದರೆ ಪ್ರಸಾದ್ ನೇತ್ರಾಲಯದಿಂದ ಸಹಕಾರ ನೀಡಲಿದ್ದೇನೆ ಎಂದರು.

ನಿಟ್ಟೆ ವಿಶ್ವ ವಿದ್ಯಾಲಯದ ಉಪಾಧ್ಯಕ್ಷ ಪ್ರೊ.ಡಾ. ಸತೀಶ್ ಕುಮಾರ ಭಂಡಾರಿಯವರು ಮಾತನಾಡಿ ಮಾರಣಕಟ್ಟೆಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಎಲ್ಲಾ ಸೌಲಭ್ಯ ಒದಗಿಸುತ್ತಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ನುಡಿದರು.
ನಿಟ್ಟೆ ಯುನಿರ್ವಸಿಟಿಯ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ಸಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಸ್ಥಾಪಕ ಡೀನ್ ಪ್ರೊ. ಡಾ.ನೈಲಾಡಿ ಶ್ರೀಧರ ಶೆಟ್ಟಿ ಶೆಟ್ಟಿ, ಡಿಪಾರ್ಟ್ ಮೆಂಟ್ ಆಫ್ ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ಡಾ.ಆಡ್ರೆ ಡಿ.ಕ್ರೂಜ್, ಮಂಗಳೂರು ಕೆ.ಎಸ್.ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯ ಕಮ್ಯುನಿಟಿಮೆಡಿಸಿನ್ ವಿಭಾಗದ ಡಾ.ರಾಘವೇಂದ್ರ, ಕುಂದಾಪುರ ನ್ಯೂ ಮೆಡಿಕಲ್ ಸೆಂಟರ್ ಮತ್ತು ಶ್ರೀ ಸಾಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ರಂಜನ್ ಶೆಟ್ಟಿ, ಸಪ್ರಭಾತ್ ಗ್ರೂಫ್ ಆಫ್ ಹೋಟೆಲ್ಸ್ ಮಾಲಕ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಭಾಗವಹಿಸಿದ್ದರು.

ದೇವಸ್ಥಾನದ ವತಿಯಿಂದ ಅನಾರೋಗ್ಯಕ್ಕೊಳಗಾದವರ ಚಿಕಿತ್ಸೆಗೆ ಚೆಕ್ ವಿತರಿಸಲಾಯಿತು.
ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಮಾಜಿ ಅನುವಂಶೀಯ ಮೊಕ್ತೇಸರ ಮಂಜಯ್ಯ ಶೆಟ್ಟಿ ಸ್ವಾಗತಿಸಿದರು. ನಿವೃತ್ತ ಕೃಷಿ ಅಧಿಕಾರಿ ರಘುರಾಮ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ವಂದಿಸಿದ್ದು ಶಿಕ್ಷಕ ಗುರುಪ್ರಸಾದ್ ದೇವಾಡಿಗ ನಿರೂಪಿಸಿದರು.

ಶಿಬಿರಕ್ಕೆ ಬರುವ ಆಶಕ್ತರಿಗೆ, ಹಿರಿಯರಿಗೆ ವಾಹನದ ವ್ಯವಸ್ಥೆ ಮಾಡಿದ್ದು 1032ಕ್ಕೂ ಅಧಿಕ ಮಂದಿ ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿದರು. ರಕ್ತದಾನ ಶಿಬಿರದಲ್ಲಿ 132 ಮಂದಿ ಭಾಗವಹಿಸಿ ರಕ್ತದಾನ ಮಾಡಿದರು. 455 ಮಂದಿ ಕಣ್ಣಿನ ಚಿಕಿತ್ಸೆಗೆ, 169 ಮಂದಿ ಹೃದಯ ಸಿಕಿತ್ಸೆಗೆ, 166 ಮಂದಿ ಮೂಳೆ ಮತ್ತು ನರದ ಚಿಕಿತ್ಸೆಗೆ ಹಾಗೂ 374 ಮಂದಿ ಇನ್ನಿತರ ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿದರು.
ಶಿಬಿರದ ಯಶಸ್ಸಿಗೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಾರಣಕಟ್ಟೆ ದೇವಸ್ಥಾನದ ಸಿಬ್ಬಂದಿ ವರ್ಗ, ಚಿತ್ತೂರು ಗುಡಿಕೇರಿಮನೆ ಕುಟುಂಬಸ್ಥರು ಸಹಕರಿಸಿದರು.



