ಉಡುಪಿಮಿತ್ರ ಪತ್ರಿಕೆ ಸುದ್ಧಿ :
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಬ್ರಹ್ಮಾವರ, ಸೆ. ೧೩: ನಮ್ಮ ಸಂಸ್ಕೃತಿ ಉಳಿಯಬೇಕಾದರೆ ಹಿರಿಯರು ತೋರಿಸಿದ ಆಚರಣೆಗಳನ್ನು ಪಾಲಿಸಬೇಕು ಹಾಗೂ ಸದಾ ದೇವರ ಸ್ಮರಣೆ ಮಾಡಬೇಕು. ಭಜನೆ ದೇವರನ್ನು ಪೂಜಿಸಲು ಇರುವ ಸುಲಭದ ಮಾರ್ಗ. ಕುಳಿತು ಅಥವಾ ಕುಣಿದು ಭಜನೆ ಮಾಡುವುದರಿಂದ ದೇವರ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ನುಡಿದರು.
ಅವರು ಚಾಂತಾರು ಅಗ್ರಹಾರ ವೆಂಕಟರಮಣ ಭಜನಾ ಮಂಡಳಿಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ೧೨೨ ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಭಜನಾ ಮಂಡಳಿಯು ನಿರಂತರವಾಗಿ ದೇವರನ್ನು ಆರಾಧಿಸುತ್ತಾ ಬಂದಿರುವುದು ಶ್ಲಾಘನೀಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಜನಾ ಮಂಡಳಿಯ ಅಧ್ಯಕ್ಷ ಅಶೋಕ್ ನಾಯರಿ ಮಾತನಾಡಿ, ನೂತನ ಭಜನಾ ಮಂಡಳಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸಾರ್ವಜನಿಕರ ಹಾಗೂ ಭಕ್ತಾದಿಗಳ ಪೂರ್ಣ ಸಹಕಾರ ಕೋರಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ಬಿ. ದಯಾನಂದ ಶೆಟ್ಟಿ ಮಾತನಾಡಿ, ಭಜನಾ ಮಂಡಳಿಯು ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಇದರ ಮೂಲಕ ಊರಿನ ಜನರೆಲ್ಲರೂ ಒಂದಾಗಿ ಸಂಘಟಿತರಾಗಲು ಸಾಧ್ಯವಾಗಿದೆ ಎಂದರು. ಭಜನಾ ಮಂಡಳಿಯ ಗೌರವಾಧ್ಯಕ್ಷ ದಾವಣಗೆರೆಯ ಹೋಟೆಲ್ ಉದ್ಯಮಿ ಉಪ್ಪರಿಗೆಮನೆ ಮಲ್ಯಾಡಿ ಪ್ರಭಾಕರ ಶೆಟ್ಟಿ ಮಾತನಾಡಿ,, ಊರಿನಲ್ಲಿ ನಡೆಯುವ ಭಜನಾ ಕಾರ್ಯಕ್ರಮಗಳು ಮಾದರಿಯಾಗಿ ಮೂಡಿಬರುತ್ತಿದ್ದು, ಸ್ಥಳೀಯರು ಹಾಗೂ ಹೊರಊರುಗಳಲ್ಲಿ ನೆಲೆಸಿರುವ ಬಂಧುಗಳು ನೂತನ ಕಟ್ಟಡ ನಿರ್ಮಾಣಕ್ಕೆ ಧನಸಹಾಯ ನೀಡಿ ಬೆಂಬಲಿಸಬೇಕಾಗಿ ಮನವಿ ಮಾಡಿದರು.

ವೇದಿಕೆಯಲ್ಲಿ ಶ್ರೀ ಕಾಶಿ ವಿಶ್ವನಾಥ ಹಾಗೂ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಸೂರಪ್ಪಯ್ಯ ರಾವ್, ಬೆಂಗಳೂರು ಆನೆಕಲ್ಲಿನ ಶ್ರೀ ಧನಲಕ್ಷ್ಮೀ ಹೋಟೆಲ್ ಮಾಲಕ ಅಣ್ಣಪ್ಪ ನಾಯರಿ ಹಾಗೂ ದೇವಳದ ಪ್ರಧಾನ ಅರ್ಚಕ ಹಾಗೂ ಪುರೋಹಿತರಾದ ಶ್ರೀಧರ ಹೆಗ್ಡೆ ಉಪಸ್ಥಿತರಿದ್ದರು.

ಶ್ರೀಧರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಶ್ರೀಮತಿ ವೀಣಾ ರಾಜೇಶ್ ಪ್ರಾರ್ಥಿಸಿದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಸ್ವಾಗತಿಸಿದರು. ವಿಜಯ ನಾಯರಿ ವಂದಿಸಿದ್ದು ಹಾಗೂ ಶ್ರೀಮತಿ ನಾಗವೇಣಿ ರಾವ್ ನಿರೂಪಿಸಿದರು. ವೆಂಕಟರಮಣ ಭಜನಾ ಮಂಡಳಿಯ ಸರ್ವ ಸದಸ್ಯರು ಹಾಗೂ ವೆಂಕಟರಮಣ ಮಹಿಳಾ ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು. ಕೊನೆಯಲ್ಲಿ ಸಾರ್ವಜನಿಕರಿಂದ ಸೋಣಾರತಿ ಸೇವೆ ಮತ್ತು ಸಂತರ್ಪಣೆ ಜರುಗಿತು.




