udupimitra.in
  • August 24, 2026
  • Last Update August 24, 2026 6:49 pm
  • Brahmavara

ಜೋಡಿ ಕೊಲೆ ; ಇಡೀ ರಾತ್ರಿ ಶವಗಳೊಂದಿಗೆ ಮಲಗಿದ್ದಆರೋಪಿ!

ಜೋಡಿ ಕೊಲೆ ; ಇಡೀ ರಾತ್ರಿ ಶವಗಳೊಂದಿಗೆ ಮಲಗಿದ್ದಆರೋಪಿ!

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಬ್ರಹ್ಮಾವರ (ಅ. ೨೪): ತಾಲೂಕಿನ ಬೈಕಾಡಿ ಗಾಂಧಿನಗರದಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ನಡೆದಿದ್ದು, ಹೆತ್ತ ತಂದೆ ಮತ್ತು ತಾಯಿಯನ್ನೇ ಮಗನೇ ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕೊಲೆಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಘಟನೆಯ ವಿವರ:
ಬೈಕಾಡಿ ಗಾಂಧಿನಗರದ ನಿವಾಸಿ ಶಾಯಿದ್ ಅಲಿ (೩೧) ಎಂಬಾತನೇ ತನ್ನ ತಂದೆ ಮಹಮ್ಮದ್ ಅಲಿ (೫೫) ಹಾಗೂ ತಾಯಿ ಸಂಶದ್ ಬೇಗಂ (೫೦) ಅವರನ್ನು ಕೊಲೆ ಮಾಡಿದ ಆರೋಪಿ.

ರಾತ್ರಿ ಇಬ್ಬರೂ ಗಾಢ ನಿದ್ದೆಯಲ್ಲಿದ್ದಾಗ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಕೃತ್ಯ ಎಸಗಿದ ಬಳಿಕ ರಾತ್ರಿಯಿಡೀ ಹೆಣಗಳ ಜೊತೆಯಲ್ಲೇ ಕಾಲ ಕಳೆದ ಆರೋಪಿ, ಬೆಳಿಗ್ಗೆ ೯:೦೦ ಗಂಟೆಯ ಸುಮಾರಿಗೆ ತಾನೇ ೧೧೨ (ತುರ್ತು ಪೊಲೀಸ್ ನೆರವು) ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಬ್ರಹ್ಮಾವರ ಠಾಣೆಯ ಪೊಲೀಸರು ಮನೆ ಹೊಕ್ಕು ನೋಡಿದಾಗ ಜೋಡಿ ಕೊಲೆಯ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ, ಆರೋಪಿ ಶಾಯಿದ್ ಅಲಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರ ತನಿಖೆಯ ವೇಳೆ ಆರೋಪಿ ಶಾಯಿದ್ ಅಲಿ, ನನ್ನ ತಂದೆ-ತಾಯಿ ಪ್ರತಿನಿತ್ಯ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದರು. ನನ್ನನ್ನು ಯಾರೊಂದಿಗೂ ಬೆರೆಯಲು ಬಿಡುತ್ತಿರಲಿಲ್ಲ. ಹಾಗಾಗಿ ಅವರನ್ನು ಕೊಲೆ ಮಾಡಿದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆಂದು ತಿಳಿದು ಬಂದಿದೆ.

ಮೃತ ಮಹಮ್ಮದ್ ಅಲಿ ಮೂಲತಃ ತೀರ್ಥಹಳ್ಳಿಯವರಾಗಿದ್ದು, ಸುಮಾರು ೩೦ ವರ್ಷಗಳ ಹಿಂದೆಯೇ ಬೈಕಾಡಿ ಗಾಂಧಿನಗರಕ್ಕೆ ಬಂದು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದರು. ವೃತ್ತಿಯಲ್ಲಿ ಮಲ್ಪೆಯಲ್ಲಿ ಮೀನು ಸಾಗಾಟ ವಾಹನದ ಚಾಲಕರಾಗಿದ್ದ ಅವರು ಸೌಮ್ಯ ಸ್ವಭಾವದವರಾಗಿದ್ದರು. ತಾಯಿ ಸಂಶದ್ ಬೇಗಂ ಮಲ್ಪೆಯವರಾಗಿದ್ದು, ದಂಪತಿ ಇಬ್ಬರೂ ತಮ್ಮ ಪಾಡಿಗೆ ತಾವಿದ್ದು ಸುತ್ತಮುತ್ತಲಿನವರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದರು.
ಆರೋಪಿ ಶಾಯಿದ್ ಅಲಿ ಸದಾ ಮನೆಯಲ್ಲೇ ಇರುತ್ತಿದ್ದು, ಆಸುಪಾಸಿನ ಯುವಕರೊಂದಿಗೂ ಬೆರೆಯುತ್ತಿರಲಿಲ್ಲ. ಇತ್ತೀಚೆಗೆ ಈತ ಝೊಮ್ಯಾಟೋ (Zomಚಿಣo) ಫುಡ್ ಡೆಲಿವರಿ ಕೆಲಸಕ್ಕೆ ಸೇರಿಕೊಂಡಿದ್ದ. ಆದರೆ ತಂದೆ-ತಾಯಿಗೆ ಈ ಕೆಲಸ ಇಷ್ಟವಿರಲಿಲ್ಲ. ಹೀಗಾಗಿ ಹೆತ್ತವರ ವಿರೋಧದಿಂದಾಗಿ ಕೆಲಸಕ್ಕೂ ರಜೆ ಹಾಕಿ ಮನೆಯಲ್ಲೇ ಉಳಿದುಕೊಂಡಿದ್ದ. ತಂದೆ-ತಾಯಿ ಈ ಕೆಲಸವನ್ನು ವಿರೋಧಿಸಿದ್ದು ಕೂಡ ಆತನ ಆಕ್ರೋಶಕ್ಕೆ ಕಾರಣವಾಗಿತ್ತು ಎಂದು ತಿಳಿದುಬಂದಿದೆ.

ನಿದ್ದೆಯಲ್ಲಿದ್ದಾಗಲೇ ಬಲಿ:
ಆರೋಪಿಯ ಪ್ರಕಾರ, ಆತ ಸಂಜೆ 7:೦೦ ಗಂಟೆಯ ಸುಮಾರಿಗೆ ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾನೆ. ಮನೆಯ ಒಳಗಿನ ಮಂಚದ ಮೇಲೆ ತಾಯಿ ಸಂಶದ್ ಬೇಗಂ ಮಲಗಿದ್ದ ಸ್ಥಿತಿಯಲ್ಲೇ ಹೆಣವಾಗಿದ್ದರೆ, ತಂದೆ ಮಹಮ್ಮದ್ ಅಲಿ ಹೊರಗಿನ ಸೋಫಾದ ಮೇಲೆ ಮಲಗಿದ್ದ ಸ್ಥಿತಿಯಲ್ಲೇ ಸತ್ತು ಬಿದ್ದಿದ್ದರು. ಇಬ್ಬರೂ ಗಾಢ ನಿದ್ದೆಯಲ್ಲಿದ್ದಾಗ ಈತ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿ ಶಾಯಿದ್ ಅಲಿ,ಇಡೀ ರಾತ್ರಿ ಶವಗಳೊಂದಿಗೆ ಮಲಗಿದ್ದ!

ಬೆಳಕಿಗೆ ಬಂದಿದ್ದು ಹೇಗೆ?
ಈ ಮನೆಯ ಸುತ್ತಲೂ ಎತ್ತರದ ಬೇಲಿ ಹಾಗೂ ಹಸಿರು ನೆಟ್ (ಮೆಸ್) ಕಟ್ಟಿರುವುದರಿಂದ ಮನೆಯ ಅಂಗಳದಲ್ಲಾಗಲಿ, ಒಳಗಾಗಲಿ ಏನು ನಡೆದರೂ ಹೊರಗಿನವರಿಗೆ ತಿಳಿಯುತ್ತಿರಲಿಲ್ಲ. ಅಲ್ಲದೆ ಕುಟುಂಬದವರು ಯಾರೊಂದಿಗೂ ಹೆಚ್ಚಾಗಿ ಬೆರೆಯದ ಕಾರಣ ಮನೆಗೆ ಯಾರೂ ಬರುತ್ತಿರಲಿಲ್ಲ.

ಬೆಳಿಗ್ಗೆ ಆರೋಪಿಯೇ ಸ್ವತಃ ಫೋನ್ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಒಂದು ವೇಳೆ ಆರೋಪಿ ಓಡಿ ಹೋಗಿದ್ದರೆ, ಈ ಕೃತ್ಯ ಬೆಳಕಿಗೆ ಬರಲು ಒಂದೆರಡು ದಿನಗಳು ಹಿಡಿಯುತ್ತಿತ್ತು ಎಂದು ಅಕ್ಕಪಕ್ಕದ ನಿವಾಸಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

administrator

Related Articles

Leave a Reply

Your email address will not be published. Required fields are marked *

You cannot copy content of this page