ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬೆಂಗ್ರೆ, ಕೆಮ್ಮಣ್ಣು ನಿವಾಸಿ ಮನ್ವಿತ್ ಖಾರ್ವಿ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಬಾಲ್ಯದಿಂದಲೇ ಕ್ರೀಡಾಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಮನ್ವಿತ್, ತನ್ನ ಊರಿನ ಹಾಗೂ ಆಸುಪಾಸಿನಲ್ಲಿ ನಡೆಯುತ್ತಿದ್ದ ವಾಲಿಬಾಲ್ ಪಂದ್ಯಾಟಗಳಲ್ಲಿ ಭಾಗವಹಿಸುವ ಮೂಲಕ ಕ್ರೀಡೆಯತ್ತ ಆಕರ್ಷಿತರಾದರು. ಇದೇ ಅವರ ಕ್ರೀಡಾ ಬದುಕಿಗೆ ಪ್ರೇರಣೆಯಾಯಿತು.

ಮೌಂಟ್ ರೋಸರಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಶಿಕ್ಷಕ ನಾಗೇಶ್ ಅವರಿಂದ ವಾಲಿಬಾಲ್ ತರಬೇತಿ ಪಡೆದುಕೊಂಡರು. ನಂತರ ಹೈಸ್ಕೂಲ್ ಶಿಕ್ಷಣಕ್ಕಾಗಿ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಗೆ ಸೇರ್ಪಡೆಗೊಂಡು, ಅಲ್ಲಿಯೂ ತಮ್ಮ ವಾಲಿಬಾಲ್ ತರಬೇತಿಯನ್ನು ಮುಂದುವರಿಸಿದರು. ಉಡುಪಿ ಜಿಲ್ಲೆಯ ವಿವಿಧೆಡೆ ನಡೆಯುತ್ತಿದ್ದ ವಾಲಿಬಾಲ್ ಪಂದ್ಯಾಟಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಗಳಿಸಿದರು.
ಮನ್ವಿತ್ ಅವರ ಕ್ರೀಡಾ ಪ್ರತಿಭೆ ಹಾಗೂ ಕ್ರೀಡಾಸ್ಪೂರ್ತಿಯನ್ನು ಗಮನಿಸಿದ ಅವರ ಪೋಷಕರು ಹಾಗೂ ಕ್ರೀಡಾಭಿಮಾನಿ ಜಿಯಾ ಬೊಳ್ಳಯಿ ಅವರ ಪ್ರೋತ್ಸಾಹದಿಂದ, ಕ್ರೀಡಾಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವ ಉದ್ದೇಶದಿಂದ ಎಸ್.ಜಿ.ವಿ.ಕೆ ಪದವಿ ಪೂರ್ವ ಕಾಲೇಜು, ಕೈರಂಗಳ, ಮಂಗಳೂರು ಇಲ್ಲಿ ಮುಂದಿನ ವ್ಯಾಸಂಗಕ್ಕೆ ಸೇರಿಸಿದರು.
ಹಗಲಿರುಳು ಕಠಿಣ ಅಭ್ಯಾಸ ನಡೆಸುತ್ತಾ, ತರಬೇತುದಾರರಾದ ನಿಖಿಲ್ ಗಟ್ಟಿ ಕೈರಂಗಳ ಅವರ ಮಾರ್ಗದರ್ಶನದಲ್ಲಿ ತಮ್ಮ ಕ್ರೀಡಾ ಪ್ರತಿಭೆಯನ್ನು ಮತ್ತಷ್ಟು ಬೆಳೆಸಿಕೊಂಡರು. ವಿವೇಕಾನಂದ ಪಿಯು ಕಾಲೇಜು, ಪುತ್ತೂರು ಇಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ತಂಡದೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡರು.
ನಂತರ ಬೀದರ್‌ನ ನೆಹರು ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಇದೀಗ ತಮ್ಮ ತರಬೇತುದಾರರು, ಪೋಷಕರು ಹಾಗೂ ಕ್ರೀಡಾಭಿಮಾನಿಗಳ ಪ್ರೋತ್ಸಾಹ ಮತ್ತು ಮಾರ್ಗದರ್ಶನದೊಂದಿಗೆ ಅಕ್ಟೋಬರ್ ೨೨ರಂದು ಉತ್ತರ ಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದಿದ್ದಾರೆ.
ಮನ್ವಿತ್ ಖಾರ್ವಿ ಅವರ ಈ ಸಾಧನೆ ಹೆಮ್ಮೆಯ ಸಂಗತಿಯಾಗಿದ್ದು, ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವಂತಾಗಲಿ ಎಂಬುದು ಆಶಯವಾಗಿದೆ.



