ಉಡುಪಿಮಿತ್ರ ಪತ್ರಿಕೆ ಸುದ್ಧಿ:
ಶಂಕರನಾರಾಯಣ, ಅ.೧೦: ರಸ್ತೆ ಬಿಡುವ ವಿಚಾರದಲ್ಲಿ ಉಂಟಾದ ತಕರಾರಿನಿಂದ ಮಹಿಳೆಯೊಬ್ಬರ ತೋಟಕ್ಕೆ ಅಕ್ರಮ ಪ್ರವೇಶಿಸಿ ಅಡಿಕೆ ಗಿಡಗಳನ್ನು ಕಿತ್ತು, ನೀರಿನ ಪೈಪ್ ಕಡಿದು ಜೀವ ಬೆದರಿಕೆ ಹಾಕಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಜ್ರಿ ಗ್ರಾಮದ ಬಾಂಡ್ಯಾ, ಹರ್ಮಣ್ಣು ನಿವಾಸಿ ಸರಸ್ವತಿ (೬೪) ಎಂಬವರಿಗೂ ಚೈತ್ರಾ ಶೆಡ್ತಿ ಮತ್ತು ಮಾಲತಿ ಶೆಡ್ತಿ ಎಂಬವರಿಗೂ ರಸ್ತೆಗಾಗಿ ಜಾಗ ಬಿಡುವ ವಿಚಾರದಲ್ಲಿ ಹಲವು ವರ್ಷಗಳಿಂದ ವಿವಾದವಿತ್ತು. ಸುಮಾರು ಒಂದು ವಾರದ ಹಿಂದೆ ಮಾತುಕತೆ ನಡೆಸಿ ೧೨ ಅಡಿ ಅಗಲದಷ್ಟು ಜಾಗವನ್ನು ರಸ್ತೆಗಾಗಿ ಬಿಡಲು ನಿರ್ಧರಿಸಲಾಗಿತ್ತು. ರಸ್ತೆ ಬದಿಯ ತಮ್ಮ ಜಾಗದಲ್ಲಿ ಸರಸ್ವತಿ ಅವರು ಅಡಿಕೆ ಗಿಡಗಳನ್ನು ನೆಟ್ಟಿದ್ದರು.
ಅ.೮ರಂದು ಮಧ್ಯಾಹ್ನ ೧೨.೩೦ರ ಸುಮಾರಿಗೆ ಮಾಲತಿ ಶೆಡ್ತಿ ಕೈಯಲ್ಲಿ ಕಬ್ಬಿಣದ ರಾಡ್ ಹಾಗೂ ಚೈತ್ರಾ ಶೆಡ್ತಿ ಕತ್ತಿ ಹಿಡಿದುಕೊಂಡು ತಮ್ಮ ಜಾಗಕ್ಕೆ ಅಕ್ರಮ ಪ್ರವೇಶಿಸಿ, ನೆಟ್ಟಿದ್ದ ಅಡಿಕೆ ಗಿಡಗಳನ್ನು ಕಿತ್ತುಹಾಕಿ, ನೀರಿನ ಪೈಪ್‌ನ್ನು ಕತ್ತಿಯಿಂದ ಕಡಿದು ನಷ್ಟ ಉಂಟುಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸರಸ್ವತಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ೬೭/೨೦೨೬ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


