ಬ್ರಹ್ಮಾವರ ಅ.೬: ಬ್ರಹ್ಮಾವರದ ಪಶು ಆಸ್ಪತ್ರೆಯ ಆವರಣದಲ್ಲಿ ವಿಶ್ವ ರೇಬಿಸ್ ದಿನಾಚರಣೆಯ ಪ್ರಯುಕ್ತ ಜಾಗೃತಿ ಮೂಡಿಸುವಿಕೆ, ಉಚಿತ ರೇಬಿಸ್ ನಿರೋಧಕ ಲಸಿಕೆ ವಿತರಣೆ, ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಶಾಸಕರಾದ ಶ್ರೀ ಯಶ್‌ಪಾಲ್ ಎ. ಸುವರ್ಣ ಉದ್ಘಾಟಿಸಿದರು. ವಾರಂಬಳ್ಳಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ವಿವೇಕಾನಂದ ಗಾಂವ್‌ಕಾರ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಡಾ. ಸುನಿತಾ ಡಿ. ಶೆಟ್ಟಿ ರೇಬಿಸ್ ನಿರ್ಮೂಲನೆ ಕುರಿತ ಜಾಗೃತಿ ಕರಪತ್ರ ಬಿಡುಗಡೆ ಮಾಡಿದರು.

ಬ್ರಹ್ಮಾವರ ಫೌಂಡೇಶನ್ (ರಿ.) ನ ಮ್ಯಾನೇಜಿಂಗ್ ಟ್ರಸ್ಟಿ ಬಿ. ಗೋವಿಂದರಾಜ್ ಹೆಗ್ಡೆ ಅವರ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ-ಸಂಸ್ಥೆಗಳನ್ನು ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಡಾ. ಎಂ.ಸಿ. ರೆಡ್ಡಪ್ಪ, ಕರ್ನಾಟಕ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಮಹೇಶ್ ಶೆಟ್ಟಿ, ಎಸ್.ಎಂ.ಎಸ್. ಕಾಲೇಜಿನ ಪ್ರಾಂಶುಪಾಲ ರೋಬರ್ಟ್ ರೋಡ್ರಿಗಸ್, ಲಯನ್ಸ್ ಕ್ಲಬ್ ಅಧ್ಯಕ್ಷ ಗ್ರೆಗರಿ ಡಿ’ಸಿಲ್ವ, ರೋಟರಿ ರಾಯಲ್ ಅಧ್ಯಕ್ಷ ಉಮಾಶಂಕರ ಶೆಟ್ಟಿ ಮತ್ತು ಬ್ರಹ್ಮಾವರ ಅಭಿವೃದ್ಧಿ ಸಮಿತಿಯ ಜೇಮ್ಸ್ ಡಿ’ಸಿಲ್ವ ಭಾಗವಹಿಸಿದ್ದರು.

ಬ್ರಹ್ಮಾವರ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ. ಉದಯಕುಮಾರ್ ಶೆಟ್ಟಿ ಸ್ವಾಗತಿಸಿದರು.
ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ, ಹಾರಾಡಿ, ಚಾಂತಾರು ಹಾಗೂ ಹಂದಾಡಿ ಪಂಚಾಯತ್ ವ್ಯಾಪ್ತಿಯ ೨೯ ವಿವಿಧ ಸ್ಥಳಗಳಲ್ಲಿ ಒಟ್ಟು 625 ಸಾಕು ನಾಯಿಗಳಿಗೆ ಉಚಿತ ರೇಬಿಸ್ ನಿರೋಧಕ ಲಸಿಕೆ ಹಾಕಲಾಯಿತು.


