udupimitra.in
  • October 8, 2026
  • Last Update October 8, 2026 5:49 pm
  • Brahmavara

ಉಚ್ಚಿಲ ದಸರಾಕ್ಕೆ ಸಜ್ಜು: ಅ.12ರಂದು ಮುಖ್ಯಮಂತ್ರಿ ಡಿಕೆಶಿ ಅವರಿಂದ ಮಹಿಳಾ ದಸರಾ ಉದ್ಘಾಟನೆ – ನಾಡೋಜ ಡಾ.ಜಿ. ಶಂಕರ್ ಮಾಹಿತಿ

ಉಚ್ಚಿಲ ದಸರಾಕ್ಕೆ ಸಜ್ಜು: ಅ.12ರಂದು ಮುಖ್ಯಮಂತ್ರಿ ಡಿಕೆಶಿ ಅವರಿಂದ ಮಹಿಳಾ ದಸರಾ ಉದ್ಘಾಟನೆ – ನಾಡೋಜ ಡಾ.ಜಿ. ಶಂಕರ್ ಮಾಹಿತಿ

ಉಡುಪಿ ಮಿತ್ರ ಪತ್ರಿಕೆ ವೆಬ್‌ಸೈಟ್ ಸುದ್ಧಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ

ಉಚ್ಚಿಲ ಅ.೮: ಶ್ರೀ ಕ್ಷೇತ್ರ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆಶ್ರಯದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವತಿಯಿಂದ ಆಯೋಜಿಸಲಾಗಿರುವ ಐದನೇ ವರ್ಷದ ‘ಉಡುಪಿ ಉಚ್ಚಿಲ ದಸರಾ ೨೦೨೬ ಅ.೧೧ರಿಂದ ೨೧ರವರೆಗೆ ನಡೆಯಲಿದೆ ಎಂದು ನಾಡೋಜ ಡಾ.ಜಿ.ಶಂಕರ್ ನುಡಿದರು. ಅವರು ಉಚ್ಚಿಲದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.


11 ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ದಸರಾ ಮಹೋತ್ಸವ ನಡೆಯಲಿದ್ದು, ಅ.೨೧ರಂದು ಕಾಪು ಸಮುದ್ರತೀರದಲ್ಲಿ ನಡೆಯಲಿರುವ ಭವ್ಯ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಲಿವೆ.
ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ನಿರ್ಮಿಸಲಾಗುವ ವಿಶೇಷ ಮಂಟಪದಲ್ಲಿ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ೧೧ ದಿನಗಳ ಕಾಲ ಶಾಸ್ತ್ರೋಕ್ತ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಗುವುದು. ಉತ್ಸವದ ಅವಧಿಯಲ್ಲಿ ಚಂಡಿಕಾಹೋಮ, ಅನ್ನಸಂತರ್ಪಣೆ, ಸಾಮೂಹಿಕ ಕುಂಕುಮಾರ್ಚನೆ, ಭಜನೆ, ಧಾರ್ಮಿಕ ಸಭೆ, ಪ್ರವಚನ ಹಾಗೂ ಕಲ್ಪೋಕ್ತ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಅ.10ರಂದು ವಿದ್ಯುದ್ದೀಪಾಲಂಕಾರಕ್ಕೆ ಚಾಲನೆ
ಪಡುಬಿದ್ರಿಯಿಂದ ಕಾಪು ಸಮುದ್ರತೀರದವರೆಗೆ ದಸರಾ ಪ್ರಯುಕ್ತ ಕೈಗೊಂಡಿರುವ ವಿಶೇಷ ವಿದ್ಯುದ್ದೀಪಾಲಂಕಾರಕ್ಕೆ ಅ.೧೦ರಂದು ಸಂಜೆ ೬.೩೦ಕ್ಕೆ ಚಾಲನೆ ದೊರೆಯಲಿದೆ. ಶೋಭಾಯಾತ್ರೆ ಸಾಗುವ ಮಾರ್ಗದ ಮನೆ, ಅಂಗಡಿ ಹಾಗೂ ವಾಣಿಜ್ಯ ಮಳಿಗೆಗಳನ್ನು ಜಾತಿ, ಮತ, ಧರ್ಮದ ಭೇದವಿಲ್ಲದೆ ವಿದ್ಯುದ್ದೀಪಗಳು ಮತ್ತು ತಳಿರು-ತೋರಣಗಳಿಂದ ಅಲಂಕರಿಸಿ ಉತ್ಸವದ ಸಂಭ್ರಮಕ್ಕೆ ಕೈಜೋಡಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

ಅ.11ರಂದು ನವದುರ್ಗೆಯರ ಪ್ರತಿಷ್ಠಾಪನೆ
ಅ.೧೧ರಂದು ಬೆಳಿಗ್ಗೆ ೯ಕ್ಕೆ ಕ್ಷೇತ್ರದ ತಂತ್ರಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ನವದುರ್ಗೆಯರು ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳ ಪ್ರತಿಷ್ಠಾಪನೆ ನೆರವೇರಲಿದೆ.
ಇದೇ ದಿನ ಬೆಳಿಗ್ಗೆ ೧೦ಕ್ಕೆ ವಸ್ತುಪ್ರದರ್ಶನ, ಮಾಹಿತಿ ಶಿಬಿರ, ಮನೋರಂಜನಾ ಕಾರ್ಯಕ್ರಮ ಹಾಗೂ ಜಾತ್ರಾ ಮೈದಾನಕ್ಕೆ ಚಾಲನೆ ನೀಡಲಾಗುವುದು. ಮತ್ಸ್ಯದ್ವಾರ, ದವಸ-ಧಾನ್ಯಗಳಿಂದ ರೂಪಿಸಲಾದ ಮಹಾಮಾತೆಯರ ಕಲಾಕೃತಿಗಳು, ಜನಜಾಗೃತಿ ಕಲಾಕೃತಿಗಳು, ಕಲ್ಪವೃಕ್ಷ ಉತ್ಪನ್ನಗಳ ವಿನ್ಯಾಸಗಳು, ವಿಶೇಷ ಚೇತನರ ಕಲಾಕೃತಿಗಳು, ಪುಷ್ಪ?ಪಕ್ಷಿಗಳ ಪ್ರದರ್ಶನ, ಕೃಷಿಕರ ಪ್ರಾಚೀನ ಮನೆಯ ಮಾದರಿ, ಚರ್ಮವಾದ್ಯ ತಯಾರಿ, ಯಕ್ಷಗಾನ ಕಲಾಕೃತಿಗಳು, ಎತ್ತಿನ ಗಾಣ, ಜೀವಂತ ಮೀನುಗಳ ಪ್ರದರ್ಶನ, ಕರಕುಶಲ ವಸ್ತುಗಳು ಹಾಗೂ ಚನ್ನಪಟ್ಟಣ ಬೊಂಬೆ ತಯಾರಿಕೆಯಂತಹ ವೈವಿಧ್ಯಮಯ ಪ್ರದರ್ಶನಗಳು ಗಮನ ಸೆಳೆಯಲಿವೆ.

ಗಣ್ಯರ ಉಪಸ್ಥಿತಿಯಲ್ಲಿ ದಸರಾ ಉದ್ಘಾಟನೆ
ಅ.೧೧ರಂದು ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿರುವ ದಸರಾ ಉದ್ಘಾಟನಾ ಸಮಾರಂಭವನ್ನು ಮುಜರಾಯಿ, ಬಂದರು, ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ನೆರವೇರಿಸಲಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹಾಗೂ ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಎಂ. ಲಮಾಣಿ ವಿಶೇಷ ಉಪಸ್ಥಿತರಿರುವರು.

ಅ.೧೨ರಂದು ಮಧ್ಯಾಹ್ನ ೩ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹಿಳಾ ದಸರಾಕ್ಕೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ತುಳು ಭಾಷೆಗೆ ರಾಜ್ಯದ ಎರಡನೇ ಆಡಳಿತ ಭಾಷೆಯ ಸ್ಥಾನಮಾನ ದೊರಕಿಸಿಕೊಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅಭಿನಂದಿಸಲಾಗುವುದು.

ಸಂಗೀತ?ನೃತ್ಯ?ನಾಟಕಗಳ ಸಾಂಸ್ಕೃತಿಕ ವೈಭವ:
ದಸರಾ ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಲೋಕ್ ಬಾಬು ಅವರ ‘ಆಲ್ ಓಕೆ’ ತಂಡದ ಸಂಗೀತ ರಸಮಂಜರಿ, ಕೇರಳದ ಸಿತಾನಿ ಭಜನ್ಸ್ ತಂಡದ ಭಜನ್ ಫ್ಯೂಶನ್, ನಾಟ್ಯಾನಿಲಯಂ ಮಂಜೇಶ್ವರ ತಂಡದ ಜಾನಪದ ಮತ್ತು ಶಾಸ್ತ್ರೀಯ ನೃತ್ಯ, ಪುತ್ತೂರು ಜಗದೀಶ್ ಆಚಾರ್ಯ ಅವರ ಸಂಗೀತ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳು ಆಯೋಜನೆಯಾಗಿವೆ.
ಆಳ್ವಾಸ್ ಸಾಂಸ್ಕೃತಿಕ ವೈಭವ, ಭರತನಾಟ್ಯ, ಜಾನಪದ ನೃತ್ಯ, ನೃತ್ಯರೂಪಕ, ಸ್ಯಾಕ್ಸೋಫೋನ್ ವಾದನ, ಶಾಸ್ತ್ರೀಯ ಸಂಗೀತ ಹಾಗೂ ವೀಣಾವಾದನಕ್ಕೂ ವೇದಿಕೆ ಸಿದ್ಧವಾಗಲಿದೆ. ತುಳು ಹಾಸ್ಯ ನಾಟಕಗಳಾದ ‘ರಾಘು ಮಾಸ್ಟ್ರು’ ಮತ್ತು ‘ಮಹಿಮೆದ ಅಪ್ಪೆ ಭಗವತಿ’ ಪ್ರದರ್ಶನವೂ ನಡೆಯಲಿದೆ.
ರಾಜ್ಯಮಟ್ಟದ ಸ್ಪರ್ಧೆಗಳಿಗೆ ವೇದಿಕೆ
ದಸರಾ ಅಂಗವಾಗಿ ರಾಜ್ಯಮಟ್ಟದ ಆಹ್ವಾನಿತ ತಂಡಗಳಿಂದ ನೃತ್ಯೋತ್ಸವ ಹಾಗೂ ನೃತ್ಯ ಸ್ಪರ್ಧೆ ನಡೆಯಲಿದೆ. ಮಕ್ಕಳಿಗಾಗಿ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಮಹಿಳೆಯರು ಮತ್ತು ಪುರುಷರ ಹುಲಿಕುಣಿತ, ಮಕ್ಕಳ ಕಿನ್ನಿ ಪಿಲಿ ನಲಿಕೆ, ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ, ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ, ಸಾಮೂಹಿಕ ಕುಣಿತ ಭಜನೆ, ದಾಂಡಿಯಾ ನೃತ್ಯ ಹಾಗೂ ದಸರಾ ಕವಿಗೋಷ್ಠಿ ಕೂಡ ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಲಿವೆ.

11 ದಿನವೂ ಅನ್ನಸಂತರ್ಪಣೆ:
ಉತ್ಸವದ ಎಲ್ಲ ೧೧ ದಿನಗಳಲ್ಲೂ ಭಕ್ತರಿಗೆ ಅನ್ನಸಂತರ್ಪಣೆ ಸೇರಿದಂತೆ ನಿರಂತರ ಧಾರ್ಮಿಕ ಸೇವೆಗಳನ್ನು ಕಲ್ಪಿಸಲಾಗಿದೆ. ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧೨ರವರೆಗೆ ಚಂಡಿಕಾಹೋಮ, ಮಧ್ಯಾಹ್ನ ೧೨ರಿಂದ ೩ರವರೆಗೆ ಅನ್ನಸಂತರ್ಪಣೆ, ಸಂಜೆ ೫.೩೦ರಿಂದ ೬.೧೫ರವರೆಗೆ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಹಾಗೂ ಸಂಜೆ ೬.೩೦ರಿಂದ ಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ ೮.೩೦ರಿಂದ ಕಲ್ಪೋಕ್ತ ಪೂಜೆ ನೆರವೇರಲಿದೆ.
ಪ್ರತಿದಿನ ಬೆಳಿಗ್ಗೆ ಭಜನೆ ಹಾಗೂ ಸಂಜೆ ಧಾರ್ಮಿಕ ಸಭೆ ಆಯೋಜಿಸಲಾಗಿದ್ದು, ಭಕ್ತರಿಗೆ ಸುಗಮ ದರ್ಶನ ಮತ್ತು ವ್ಯವಸ್ಥಿತ ಸೇವೆ ಒದಗಿಸಲು ಸುಮಾರು ೧,೫೦೦ ಸ್ವಯಂಸೇವಕರು ಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಸ್ವಚ್ಛತಾ ಕಾರ್ಯದಲ್ಲಿ ಮಹಿಳಾ ತಂಡಗಳು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸಹಕರಿಸಲಿದ್ದಾರೆ.

ಅ.21ರಂದು ಕಾಪು ಸಮುದ್ರತೀರದಲ್ಲಿ ದಸರಾ ಸಂಭ್ರಮ:
ಉಡುಪಿ ಉಚ್ಚಿಲ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಭವ್ಯ ಶೋಭಾಯಾತ್ರೆ ಅ.೨೧ರಂದು ಮಧ್ಯಾಹ್ನ ೩ಕ್ಕೆ ಶ್ರೀ ಕ್ಷೇತ್ರ ಉಚ್ಚಿಲದಿಂದ ಹೊರಡಲಿದೆ. ಇದಕ್ಕೂ ಮುನ್ನ ಮಧ್ಯಾಹ್ನ ೨.೩೦ಕ್ಕೆ ವಿಸರ್ಜನಾ ಪೂಜೆ ನಡೆಯಲಿದೆ.
ಉಚ್ಚಿಲದಿಂದ ರಾಷ್ಟ್ರೀಯ ಹೆದ್ದಾರಿ?೬೬ರ ಮೂಲಕ ಎರ್ಮಾಳ್, ಉಚ್ಚಿಲ ಹಾಗೂ ಮೂಳೂರು ಮಾರ್ಗವಾಗಿ ಕಾಪು ಬೀಚ್‌ನ ದೀಪಸ್ತಂಭದವರೆಗೆ ಶೋಭಾಯಾತ್ರೆ ಸಾಗಲಿದೆ. ಬಳಿಕ ಕಾಪು ಸಮುದ್ರತೀರದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಸಮುದ್ರ ಮಧ್ಯೆ ಬೋಟುಗಳ ಮೂಲಕ ಕೈಗೊಳ್ಳಲಾಗುವ ವಿದ್ಯುದ್ದೀಪಾಲಂಕಾರ, ಆಕರ್ಷಕ ಸುಡುಮದ್ದು ಪ್ರದರ್ಶನ, ಸುಮಂಗಲೆಯರಿಂದ ಸಾಮೂಹಿಕ ಮಂಗಳಾರತಿ, ಕಾಶಿಯ ಪಂಡಿತರಿಂದ ನವದುರ್ಗೆಯರು, ಶ್ರೀ ಶಾರದಾ ಮಾತೆ ಹಾಗೂ ಸಮುದ್ರರಾಜನಿಗೆ ವಿಶೇಷ ಗಂಗಾರತಿ ಮತ್ತು ಡ್ರೋನ್ ಮೂಲಕ ಪುಷ್ಪಾರ್ಚನೆ ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಗಳಾಗಿವೆ.

ಭಕ್ತರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ:
ದಸರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ವಾಹನ ನಿಲುಗಡೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಗಳೂರು ಕಡೆಯಿಂದ ಬರುವ ವಾಹನಗಳಿಗೆ ಸರಸ್ವತಿ ಶಾಲೆಯ ಮೈದಾನ ಹಾಗೂ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಉಡುಪಿ ಕಡೆಯಿಂದ ಆಗಮಿಸುವ ವಾಹನಗಳಿಗೆ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ಪಕ್ಕದ ಮೈದಾನದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಡಾ.ಜಿ.ಶಂಕರ್ ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *

You cannot copy content of this page