udupimitra.in
  • October 22, 2026
  • Last Update October 22, 2026 11:40 am
  • Brahmavara

ಉಚ್ಚಿಲ ದಸರಾಕ್ಕೆ ತೆರೆ ; ನವದುರ್ಗೆಯರ ಶೋಭಾಯಾತ್ರೆ; ಸಮುದ್ರ ತೀರದಲ್ಲಿ ಗಂಗಾರತಿ

ಉಚ್ಚಿಲ ದಸರಾಕ್ಕೆ ತೆರೆ ; ನವದುರ್ಗೆಯರ ಶೋಭಾಯಾತ್ರೆ; ಸಮುದ್ರ ತೀರದಲ್ಲಿ ಗಂಗಾರತಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಉಚ್ಚಿಲ, ಅ.೨೧: ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿದ್ದ ಉಡುಪಿ ಉಚ್ಚಿಲ ದಸರಾ-೨೦೨೬ರಕ್ಕೆ ಅ.೨೧ರಂದು ಸಂಜೆ ಮುಕ್ತಾಯ ಕಂಡಿತು.
೧೧ ದಿನಗಳ ಕಾಲ ಶಾಸ್ತ್ರೋಕ್ತ ಪೂಜಾ ವಿಧಿವಿಧಾನಗಳು, ಚಂಡಿಕಾಹೋಮ, ಅನ್ನಸಂತರ್ಪಣೆ, ಸಾಮೂಹಿಕ ಕುಂಕುಮಾರ್ಚನೆ, ಭಜನೆ, ಧಾರ್ಮಿಕ ಸಭೆ, ಪ್ರವಚನ ಹಾಗೂ ಕಲ್ಪೋಕ್ತ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದ ನಂತರ ವಿಜಯದಶಮಿಯಂದು ವೈಭವದ ಉಡುಪಿ ಉಚ್ಚಿಲ ದಸರಾಕ್ಕೆ ತೆರೆ ಎಳೆಯಲಾಯಿತು.


ನಾಡೋಜ ಡಾ| ಜಿ. ಶಂಕರ್ ಸಾರಥ್ಯದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ವೇ. ಮೂ.ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಅಪರಾಹ್ನ ೩ ಗಂಟೆಗೆ ಶಾರದೆ ಮತ್ತು ನವದುರ್ಗೆಯರಿಗೆ ವಿಸರ್ಜನ ಪೂಜೆ ನಡೆಸಲಾಯಿತು.

ವೈಭವದ ಶೋಭಾಯತ್ರೆ :
ಸಂಜೆ ೪.೩೦ರಿಂದ ವೈಭವದ ಶೋಭಾಯತ್ರೆ ಆರಂಭಗೊಂಡಿತು. ಅಂಬಾರಿಯಲ್ಲಿ ಕ್ಷೇತ್ರದ ತಾಯಿಯ ಪ್ರತಿರೂಪ ಹೊತ್ತು ತಂದ ಆನೆಯ ಪ್ರತಿಕೃತಿಗೆ ಪುಷ್ಪಾರ್ಚನೆ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯು ಶ್ರೀ ಕ್ಷೇತ್ರದಿಂದ ಆರಂಭಿಸಿ ರಾ.ಹೆ. ೬೬ರಲ್ಲಿ ಸಾಗಿ ಎರ್ಮಾಳು, ಮಸೀದಿ ಬಳಿಯ ಡೈವರ್ಶನ್‌ವರೆಗೆ ತೆರಳಿ, ಅಲ್ಲಿಂದ ಉಚ್ಚಿಲ-ಮೂಳೂರು ಮೂಲಕವಾಗಿ ಕೊಪ್ಪಲಂಗಡಿಯವರೆಗೆ ಸಾಗಿತು.


ಶೋಭಾಯಾತ್ರೆಯುದ್ದಕ್ಕೂ ವಿವಿಧ ಕಲಾತಂಡಗಳ ಪ್ರದರ್ಶನ, ವೈವಿಧ್ಯ ಮಯ ವೇಷಭೂಷಣಗಳು ಕಂಡು ಬಂದವು. ೬೦ಕ್ಕೂ ಅಧಿಕ ವೈವಿಧ್ಯಮಯ ಸ್ತಬ್ಧಚಿತ್ರಗಳು, ಧರ್ಮ
ಜಾಗೃತಿ, ಸಾಮಾಜಿಕ ಸಂದೇಶ ಸಾರುವ ಟ್ಯಾಬ್ಲೊಗಳು, ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಬೆಣ್ಣೆಕುದ್ರು ದೇವಸ್ಥಾನ, ಶ್ರೀ ಮಹಾಲಕ್ಷ್ಮೀ ದೇವಿ, ಮೊಗವೀರ ಸಮಾಜದ ಕುಲಗುರು ಮಾಧವ ಮಂಗಳ ಪೂಜಾರಿ ಹಾಗೂ ಸದಿಯ ಸಾಹುಕಾರರ ಸ್ತಬ್ಧಚಿತ್ರಗಳ ಟ್ಯಾಬ್ಲೊಗಳು ಗಮನ ಸೆಳೆದವು. ಮೀನುಗಾರಿಕೆ, ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ಧಾರ್ಮಿಕ ಶ್ರದ್ದೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು.

ವಿವಿಧ ಜಾನಪದ ಕಲಾತಂಡಗಳು, ಕುಣಿತ ಭಜನೆ ತಂಡಗಳು ಭಾಗವಹಿಸಿದ್ದರು. . ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಯೊಂದು ವಿಗ್ರಹದೊಂದಿಗೂ ಕುಣಿತ ಭಜನ ತಂಡಗಳೂ ಸಾಗಿದವು.
ದ.ಕ.ಮೊಗವೀರ ಮಹಾಜನ ಸಂಘ (ರಿ.), ಉಚ್ಚಿಲ ಇದರ ಗೌರವ ಸಲಹೆಗಾರ ನಾಡೋಜ ಡಾ|ಜಿ.ಶಂಕರ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಯಶ್‌ಪಾಲ್ ಎ. ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಗಣ್ಯರಾದ ಆನಂದ ಸಿ. ಕುಂದರ್, ಪ್ರಸಾದ್ ರಾಜ್ ಕಾಂಚನ್, ಶಾಲಿನಿ ಜಿ. ಶಂಕರ್, ಶ್ಯಾಮಿಲಿ ನವೀನ್, ವೇದಪ್ರಕಾಶ್ ಶ್ರೀಯಾನ್, ಗಣೇಶ್ ಕೆ. ಕಾಂಚನ್, ಪದ್ಮಾಕರ್, ಮೋಹನ್ ಬೇಂದ್ರೆ, ಶರಣ್ ಕುಮಾರ್ ಮಟ್ಟು ರತ್ನಾಕರ ಸಾಲ್ಯಾನ್, ವಿನಯ್ ಕರ್ಕೇರ, ಸತೀಶ್ ಕುಂದರ್, ಸಂಧ್ಯಾ ದೀಪ ಸುನೀಲ್, ವಾಸುದೇವ ಸಾಲ್ಯಾನ್, ಗುಂಡು ಅಮೀನ್, ಶ್ರೀಪತಿ ಭಟ್ ಉಚ್ಚಿಲ, ಬಾಲಕೃಷ್ಣ ಕೋಟ್ಯಾನ್ ಕಾಪು, ಶಿಲ್ಪಾ ಜಿ. ಸುವರ್ಣ, ಮನೋಜ್ ಕಾಂಚನ್, ಕವಿತಾ ಶರತ್, ಸುಗುಣಾ ಕರ್ಕೇರ, ಅನಿಲ್ ಕುಮಾರ್ ಬೊಕ್ಕಪಟ್ಣ, ಶಿವಕುಮಾರ್ ಮೆಂಡನ್, ಮನೋಜ್ ಕಾಂಚನ್, ರವೀಶ್ ಕೊರವಡಿ, ದಿನೇಶ್ ಎರ್ಮಾಳು ಮೊದಲಾದ ಗಣ್ಯರು ಶೋಭಾಯಾತ್ರೆ ಯಲ್ಲಿ ಭಾಗವಹಿಸಿದ್ದರು.


ಕಾಪು ಕಡಲತೀರದಲ್ಲಿ ಕಾಶಿಯ ಪಂಡಿತರಿಂದ ಗಂಗಾರತಿ, ಸಮುದ್ರಾರತಿ ನಡೆಯಿತು.
ಸುಡುಮದ್ದು ಪ್ರದರ್ಶನವು ಉತ್ಸವದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂತು. ಸಮುದ್ರದ ಮಧ್ಯೆ ೫೦ಕ್ಕೂ ಹೆಚ್ಚು ವಿದ್ಯುದ್ದೀಪಗಳಿಂದ ಅಲಂಕರಿಸಲಾದ ಬೋಟ್‌ಗಳಿಂದ ನಡೆದ ಸುಡುಮದ್ದು ಪ್ರದರ್ಶನ ಕಡಲ ತೀರದಲ್ಲಿ ನೆರೆದಿದ್ದ ಜನರನ್ನು ಆಕರ್ಷಿಸಿತು. ಆಕಾಶದಲ್ಲಿ ಬಣ್ಣಬಣ್ಣದ ಬೆಳಕುಗಳ ಚಿತ್ತಾರ ಮೂಡಿಸಿದ ಸುಡುಮದ್ದು ಪ್ರದರ್ಶನದೊಂದಿಗೆ ಲೇಸರ್ ಲೈಟ್ ಶೋ ಹಾಗೂ ಸಂಗೀತ ರಸಮಂಜರಿ ಉತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.


ಉತ್ಸವದ ಅಂತಿಮ ಘಟ್ಟವಾಗಿ ಕಾಪು ಬೀಚ್‌ನಲ್ಲಿ ಮಧ್ಯರಾತ್ರಿ ಶಾರದೆಯೊಂದಿಗೆ ನವದುರ್ಗೆಯರ ವಿಗ್ರಹ ಗಳನ್ನು ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ಜಲಸ್ತಂಭನ ಗೊಳಿಸಲಾಯಿತು. ಇದರೊಂದಿಗೆ ಹಲವು ದಿನಗಳಿಂದ ಧಾರ್ಮಿಕ ಶ್ರದ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜನಸಾಗರದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ಉಡುಪಿ-ಉಚ್ಚಿಲ ದಸರಾ-೨೦೨೬ಕ್ಕೆ ವೈಭವದ ತೆರೆ ಬಿದ್ದಿತು.

administrator

Related Articles

Leave a Reply

Your email address will not be published. Required fields are marked *

You cannot copy content of this page