udupimitra.in
  • October 28, 2026
  • Last Update October 27, 2026 4:38 pm
  • Brahmavara

ಬಾರ್ಕೂರಿನಲ್ಲಿ ನ. 1ರಂದು ಸುಜ್ಞಾನ ವಿದ್ಯಾರ್ಥಿವೇತನ ಪರೀಕ್ಷೆ: ಗ್ರಾಮೀಣ ಪ್ರತಿಭೆಗಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶ

ಬಾರ್ಕೂರಿನಲ್ಲಿ ನ. 1ರಂದು ಸುಜ್ಞಾನ ವಿದ್ಯಾರ್ಥಿವೇತನ ಪರೀಕ್ಷೆ: ಗ್ರಾಮೀಣ ಪ್ರತಿಭೆಗಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶ

ಉಡುಪಿಮಿತ್ರ ಪತ್ರಿಕೆ ಸುದ್ಧಿ:

ಬಾರ್ಕೂರು: ಗ್ರಾಮೀಣ ಪ್ರದೇಶದ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಬಾರ್ಕೂರು ಎಜುಕೇಶನ್ ಸೊಸೈಟಿ (ರಿ) ಮತ್ತು ಕುಂದಾಪುರದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ನವೆಂಬರ್ 1ರಂದು ಬಾರ್ಕೂರಿನ ಸುಜ್ಞಾನ ನ್ಯಾಷನಲ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿವೇತನ ಪರೀಕ್ಷೆ ಆಯೋಜಿಸಲಾಗಿದೆ.

ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ಗುಣಮಟ್ಟದ ಪಿಯು ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಪಿಯುಸಿಗೆ ದಾಖಲಾದ 100 ವಿದ್ಯಾರ್ಥಿಗಳಲ್ಲಿ 45 ಮಂದಿಗೆ ಒಟ್ಟು ₹9.40 ಲಕ್ಷ ವಿದ್ಯಾರ್ಥಿವೇತನ ನೀಡಲಾಗಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿಎ, ಸಿಎಸ್ ತರಬೇತಿ ನೀಡುವ ವ್ಯವಸ್ಥೆಯಿದೆ ಎಂದು ತಿಳಿಸಿದರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಕೋಶಾಧಿಕಾರಿ ಭರತ್ ಶೆಟ್ಟಿ ಮಾತನಾಡಿ, ಕಳೆದ ವರ್ಷ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ.ಉಚಿತ ಶಿಕ್ಷಣದಡಿ ದಾಖಲಾದ ಸಮೀದ್ ಪ್ಯಾರೀಸ್ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದಿದ್ದಾನೆ. ವಿದ್ಯಾರ್ಥಿವೇತನವು ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗುವುದರ ಜೊತೆಗೆ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುವ ಉದ್ದೇಶವನ್ನೂ ಹೊಂದಿದೆ ಎಂದರು.

ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮಗಳಲ್ಲಿ ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು. ಮಧ್ಯಂತರ ಪರೀಕ್ಷೆಯವರೆಗಿನ ಪಠ್ಯಕ್ರಮದ ಆಧಾರದಲ್ಲಿ ಒಎಂಆರ್ ಹಾಗೂ ವಿವರಣಾತ್ಮಕ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ.

ನವೆಂಬರ್ 1ರಂದು ವಿದ್ಯಾರ್ಥಿಗಳು ಬೆಳಿಗ್ಗೆ 10.30ಕ್ಕೆ ಕಾಲೇಜು ಆವರಣಕ್ಕೆ ಆಗಮಿಸಬೇಕು. ಪರೀಕ್ಷೆಗೆ ಮುನ್ನ ಹೆಸರು, ವಿಳಾಸ, ಶಾಲೆಯ ಹೆಸರು ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ಸಂಸ್ಥೆ ಸೂಚಿಸಿರುವ ಮೊಬೈಲ್ ಸಂಖ್ಯೆಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿ ನೋಂದಾಯಿಸಿಕೊಳ್ಳಬೇಕು. ನೋಂದಣಿಗಾಗಿ ಗೂಗಲ್ ಫಾರ್ಮ್ ವ್ಯವಸ್ಥೆಯೂ ಇರಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸುಜ್ಞಾನ ನ್ಯಾಷನಲ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಆಚಾರ್ ಉಪಸ್ಥಿತರಿದ್ದರು.

ನೋಂದಣಿಗಾಗಿ ಸಂಪರ್ಕಿಸಿ
6366976744 9964291755 8217527362

administrator

Related Articles

Leave a Reply

Your email address will not be published. Required fields are marked *

You cannot copy content of this page