ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಉಡುಪಿ: ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲೆಯ ಸಾಧಕರನ್ನು ಗುರುತಿಸಿ ಗೌರವಿಸುವ ಸತ್‌ಸಂಪ್ರದಾಯಕ್ಕೆ ಈ ಬಾರಿ ತಡೆ ಬೀಳುವ ಲಕ್ಷಣಗಳು ಕಂಡುಬರುತ್ತಿದ್ದು, ಜಿಲ್ಲಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಾಹಿತ್ಯ, ಶಿಕ್ಷಣ, ಲಲಿತ ಕಲೆಗಳು, ಸಮಾಜ ಸೇವೆ, ಜಾನಪದ, ಪರಿಸರ-ವಿಜ್ಞಾನ, ವೈದ್ಯಕೀಯ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕರು ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆಕಾಂಕ್ಷಿಗಳು ತಮ್ಮ ಸಾಧನೆಗಳ ದಾಖಲೆಗಳನ್ನು (ಫೈಲ್) ಸಿದ್ಧಪಡಿಸಿ, ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳಿಂದ ಶಿಫಾರಸ್ಸು ಪತ್ರಗಳನ್ನು ಪಡೆದು ಜಿಲ್ಲಾಡಳಿತದ ಮೇಲೆ ಸಾಕಷ್ಟು ಒತ್ತಡ ಹೇರಿದ್ದರು.
ಮಾಹಿತಿಯ ಪ್ರಕಾರ, ಈಗಾಗಲೇ ಹಲವು ಶಾಸಕರು ಮತ್ತು ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗಳಿಗೆ ತಮ್ಮ ಶಿಫಾರಸ್ಸು ಪತ್ರಗಳನ್ನು ತಲುಪಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗೆ ಸುಮಾರು ೨೫೦ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಕೊನೆ ಗಳಿಗೆಯಲ್ಲಿ ಜಿಲ್ಲಾಡಳಿತವು ಉಡುಪಿ ಜಿಲ್ಲಾ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಸಾಧಕರನ್ನು ಗೌರವಿಸುವ ಪ್ರಕ್ರಿಯೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ನಂಬಿಕಾರ್ಹ ಮೂಲಗಳಿಂದ ತಿಳಿದುಬಂದಿದೆ.

ಪಕ್ಕದ ಜಿಲ್ಲೆಯಲ್ಲಿ ಪುರಸ್ಕಾರ, ಉಡುಪಿಯಲ್ಲಿ ಏಕಾಏಕಿ ನಿಲುಗಡೆ: ಆಕಾಂಕ್ಷಿಗಳ ಆಕ್ರೋಶ
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಸ್ಥಳೀಯ ಸಾಧಕರನ್ನು ಗುರುತಿಸಿ ಗೌರವಿಸುವ ಸಂಪ್ರದಾಯದಿಂದಾಗಿ ಅನೇಕ ಅಪ್ರತಿಮ ಸಾಧಕರು ಬೆಳಕಿಗೆ ಬರುತ್ತಿದ್ದರು ಹಾಗೂ ಅವರಿಗೆ ಸೂಕ್ತ ಗೌರವವೂ ಲಭಿಸುತ್ತಿತ್ತು. ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯೂ ಸಾಧಕರಿಂದ ಅರ್ಜಿಗಳನ್ನು ಆಹ್ವಾನಿಸಿ ಪ್ರಶಸ್ತಿ ನೀಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಆದರೆ, ಉಡುಪಿ ಜಿಲ್ಲೆಯಲ್ಲಿ ಮಾತ್ರ ಏಕಾಏಕಿ ಈ ಪುರಸ್ಕಾರವನ್ನು ನಿಲ್ಲಿಸುತ್ತಿರುವುದು ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳಲ್ಲಿ ತೀವ್ರ ನಿರಾಶೆ ಉಂಟುಮಾಡಿದೆ. ಇಷ್ಟು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಯಾವುದೇ ಮುನ್ಸೂಚನೆ ಇಲ್ಲದೆ ನಿಲ್ಲಿಸುವುದು ಎಷ್ಟು ಸರಿ? ಎಂದು ಆಕಾಂಕ್ಷಿಗಳು ಪ್ರಶ್ನಿಸುತ್ತಿದ್ದಾರೆ.
ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯಪ್ರವೇಶಿಸಿ, ಹಿಂದಿನಂತೆ ಈ ಬಾರಿಯೂ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರವನ್ನು ಮುಂದುವರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಸಾರ್ವಜನಿಕರು ಹಾಗೂ ಪ್ರಶಸ್ತಿ ಆಕಾಂಕ್ಷಿಗಳು ಒತ್ತಾಯಿಸಿದ್ದಾರೆ.
ಪ್ರಶಸ್ತಿ ನಿಲ್ಲಿಸುವುದು ಸರಿಯಲ್ಲ – ನೀಲಾವರ ಸುರೇಂದ್ರ ಅಡಿಗ
ಜಿಲ್ಲಾಡಳಿತವು ಹಲವು ವರ್ಷಗಳಿಂದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಸಾಧಕರನ್ನು ಗುರುತಿಸಿ ಗೌರವಿಸುವ ಉತ್ತಮ ಸಂಪ್ರದಾಯವನ್ನು ನಡೆಸಿಕೊಂಡು ಬಂದಿದೆ. ನಾನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಕಳೆದ ೧೪ ವರ್ಷಗಳಿಂದ ಗಮನಿಸುತ್ತಿದ್ದು, ಯಾವ ವರ್ಷವೂ ಈ ಪ್ರಶಸ್ತಿ ಪ್ರದಾನವನ್ನು ನಿಲ್ಲಿಸಿಲ್ಲ. ಜಿಲ್ಲೆಯ ಸಾಧಕರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ ಕಾರ್ಯ ಮತ್ತು ಇದು ಪ್ರತಿ ವರ್ಷವೂ ಮುಂದುವರಿಯಬೇಕು. ಈ ವರ್ಷ ಏಕಾಏಕಿ ಪ್ರಶಸ್ತಿ ನೀಡುವುದನ್ನು ನಿಲ್ಲಿಸುತ್ತಿರುವುದು ಸರಿಯಲ್ಲ.


