• March 29, 2026
  • Last Update March 29, 2026 8:27 am
  • Brahmavara

ನಾವುಂದದಲ್ಲಿ ಭೀಕರ ರಸ್ತೆ ಅಪಘಾತ ; ಇಬ್ಬರು ಸ್ಥಳದಲ್ಲೇ ಸಾವು

ನಾವುಂದದಲ್ಲಿ ಭೀಕರ ರಸ್ತೆ ಅಪಘಾತ ; ಇಬ್ಬರು ಸ್ಥಳದಲ್ಲೇ ಸಾವು

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ದಿ :

ನಾವುಂದ, ಮಾ. 28: ನಿಂತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಾವುಂದದಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ಬೆಂಗಳೂರಿನಿಂದ ಗೋಕರ್ಣದತ್ತ ಸಾಗುತ್ತಿದ್ದ ಕೆಎ 04 ಎನ್‌ಡಿ 6994 ಸಂಖ್ಯೆಯ ಎರ್ಟಿಗಾ ಕಾರು, ನಾವುಂದದ ನಂಬಿಯಾರ್ ಕ್ಲಿನಿಕ್ ಎದುರು ಗ್ರೀಸಿಂಗ್‌ಗಾಗಿ ನಿಲ್ಲಿಸಿದ್ದ ಕೆಎ01ಎಕ್ಯೂ 0928 ಸಂಖ್ಯೆಯ Goods G& J Carrier ಲಾರಿಗೆ ಹಿಂಬದಿಯಿಂದ ಅಪ್ಪಳಿಸಿದೆ. ಅಪಘಾತದ ವೇಳೆ ಕಾರು ಅತಿವೇಗದಲ್ಲಿ ಸಂಚರಿಸುತ್ತಿತ್ತು ಎಂದು ತಿಳಿದುಬಂದಿದೆ.

ಡಿಕ್ಕಿಯ ಪರಿಣಾಮ ಕಾರಿನ ಎಡಭಾಗ ಸಂಪೂರ್ಣ ನಾಶವಾಗಿದ್ದು, ಎಡಭಾಗದಲ್ಲಿ ಕುಳಿತಿದ್ದ ಮಹಿಳೆ ಹಾಗೂ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡ ಮತ್ತೊಬ್ಬ ವ್ಯಕ್ತಿಗೆ ಕುಂದಾಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಮಣಿಪಾಲಕ್ಕೆ ಸಾಗಿಸಲಾಗಿದೆ.

ಈ ಲಾರಿಯನ್ನು ಇಬ್ರಾಹಿಂ ಅವರಿಗೆ ಸೇರಿದ ಗ್ರೀಸಿಂಗ್ ಅಂಗಡಿ ಎದುರು ನಿಲ್ಲಿಸಲಾಗಿತ್ತು. ಸ್ಥಳೀಯರ ಪ್ರಕಾರ, ಇಲ್ಲಿ ಸರಕು ಸಾಗಣೆ ಲಾರಿಗಳು ನಿರಂತರವಾಗಿ ಗ್ರೀಸಿಂಗ್‌ಗಾಗಿ ನಿಲ್ಲಿಸಲಾಗುತ್ತಿದ್ದು, ಅನಿಯಮಿತವಾಗಿ ವಾಹನ ನಿಲುಗಡೆ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ.

ಈ ಹಿಂದೆ ಕೂಡ ಏರ್ ಟ್ಯಾಂಕರ್ ಸ್ಫೋಟ ಹಾಗೂ ಟಯರ್ ಬ್ಲಾಸ್ಟ್ ಘಟನೆಗಳು ಸಂಭವಿಸಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್‌ಗೆ ದೂರು ನೀಡಲಾಗಿತ್ತು. ಬಳಿಕ ವಾಹನಗಳನ್ನು ನಿಯಮಿತ ಅಂತರದಲ್ಲಿ ನಿಲ್ಲಿಸಲು ಹಾಗೂ ಗ್ಯಾಸ್ ಟ್ಯಾಂಕರ್‌ಗಳಿಗೆ ಗ್ರೀಸಿಂಗ್ ನಿಷೇಧಿಸುವಂತೆ ಸೂಚನೆ ನೀಡಲಾಗಿತ್ತು. ಆದರೂ, ನಿಯಮಗಳ ಉಲ್ಲಂಘನೆ ಮುಂದುವರಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಅಪಘಾತಕ್ಕೊಳಗಾದ ವಾಹನಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಗುರುತು ಹಾಗೂ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

administrator

Related Articles

Leave a Reply

Your email address will not be published. Required fields are marked *

You cannot copy content of this page