udupimitra.in
  • July 29, 2026
  • Last Update July 29, 2026 6:09 pm
  • Brahmavara

ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಯವರ 22ನೇ ವರ್ಷದ ಚಾತುರ್ಮಾಸ್ಯ ವ್ರತಾರಂಭ

ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಯವರ 22ನೇ ವರ್ಷದ ಚಾತುರ್ಮಾಸ್ಯ ವ್ರತಾರಂಭ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಕಾಪು, ಜು. 29: ಗುರುವಿನ ಅನುಗ್ರಹವೇ ಬದುಕಿನ ಹುಣ್ಣಿಮೆ; ಗುರುವಿನ ಅನುಗ್ರಹವಿಲ್ಲದ ಬದುಕೇ ಅಮಾವಾಸ್ಯೆ. ಬದುಕಿನಲ್ಲಿ ಸುಖ, ಶಾಂತಿ ಮತ್ತು ಆತ್ಮಾನಂದವನ್ನು ಪಡೆಯಲು ಪ್ರತಿಯೊಬ್ಬರಿಗೂ ಗುರುವಿನ ಅನುಗ್ರಹ ಹಾಗೂ ಸಾನ್ನಿಧ್ಯ ಅಗತ್ಯವಾಗಿದೆ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ-ಪಡುಕುತ್ಯಾರು ಪೀಠಾಧಿಪತಿಗಳಾದ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಪಡುಕುತ್ಯಾರಿನ ಶ್ರೀಮಠದಲ್ಲಿ ಜು.29ರಂದು ಆರಂಭಗೊಂಡ 22ನೇ ವರ್ಷದ ಪರಾಭವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯ ಮೊದಲ ದಿನ ಧಾರ್ಮಿಕ ವೈಭವ, ವೈದಿಕ ಸಂಪ್ರದಾಯ ಹಾಗೂ ಆಧ್ಯಾತ್ಮಿಕ ಉತ್ಸಾಹದಿಂದ ಕೂಡಿದ ಕಾರ್ಯಕ್ರಮಗಳು ನೆರವೇರಿದವು. ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿ ಗುರುಗಳ ದರ್ಶನ ಹಾಗೂ ಆಶೀರ್ವಾದ ಪಡೆದರು.
ವೈದಿಕ ವಿಧಿವಿಧಾನಗಳೊಂದಿಗೆ ಚಾತುರ್ಮಾಸ್ಯಕ್ಕೆ ಚಾಲನೆ :
ಬೆಳಗಿನ ಜಾವ ಜಗದ್ಗುರುಗಳವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀಕರ ಅರ್ಚಿತ ಪೂಜೆ, ವಿಶ್ವಕರ್ಮ ಯಜ್ಞ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು. ಬಳಿಕ ಮಹಾಸ್ವಾಮಿಗಳು ಸಂಪ್ರದಾಯಬದ್ಧವಾಗಿ ವ್ಯಾಸಪೂಜೆ ನೆರವೇರಿಸಿ, ೨೨ನೇ ವರ್ಷದ ಪರಾಭವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತ ಸಂಕಲ್ಪ ಕೈಗೊಂಡರು.
ವೈದಿಕ ಕಾರ್ಯಕ್ರಮಗಳ ನೇತೃತ್ವವನ್ನು ಬ್ರಹ್ಮಶ್ರೀ ಶ್ರೀಧರ ಶರ್ಮ ಕಟಪಾಡಿ ಹಾಗೂ ಬ್ರಹ್ಮಶ್ರೀ ಅಕ್ಷಯ ಶರ್ಮ ಕಟಪಾಡಿ ವಹಿಸಿದ್ದರು. ನಾಗ ಧರ್ಮೇಂದ್ರ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆಯ ವಿದ್ಯಾರ್ಥಿಗಳು ಹಾಗೂ ಶ್ರೀ ಪೂರ್ವ ಛಾತ್ರ ಸಂಘದ ವಿದ್ಯಾರ್ಥಿಗಳು ವೇದಮಂತ್ರೋಚ್ಚಾರಣೆ ಮೂಲಕ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಕಾರ್ಯಕ್ರಮದ ವೈಭವವನ್ನು ಹೆಚ್ಚಿಸಿದರು. ಮಠದ ವಿದ್ಯಾರ್ಥಿಗಳಿಂದ ನಡೆದ ವೇದಘೋಷ ಇಡೀ ವಾತಾವರಣವನ್ನು ವೈದಿಕ ಸ್ಪಂದನದಿಂದ ತುಂಬಿಸಿತು.


ಗುರುವಿನ ಕೃಪೆಯೇ ಜೀವನದ ಬೆಳಕು
ಆಶೀರ್ವಚನದಲ್ಲಿ ಮಾತನಾಡಿದ ಶ್ರೀಗಳು, ಗುರು ಎಂದರೆ ಕೇವಲ ಬಾಹ್ಯ ಶುಚಿತ್ವ ಹೊಂದಿದ ವ್ಯಕ್ತಿಯಲ್ಲ. ಅಂತರಂಗ ಹಾಗೂ ಬಹಿರಂಗ ಶುಚಿತ್ವವನ್ನು ಕಾಪಾಡಿಕೊಂಡು, ಇಂದ್ರಿಯಗಳನ್ನು ಜಯಿಸಿ, ಶಾಸ್ತ್ರ ಅಧ್ಯಯನ ಮಾಡಿ, ಶಿಷ್ಯರನ್ನು ಮೋಕ್ಷಮಾರ್ಗದತ್ತ ಕೊಂಡೊಯ್ಯುವವನೇ ನಿಜವಾದ ಗುರು. ಅಂತಹ ಗುರುವಿನ ಅನುಗ್ರಹ ಪ್ರತಿಯೊಬ್ಬರಿಗೂ ಅಗತ್ಯ ಎಂದು ಹೇಳಿದರು.
ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಆತುರಪಡದೆ ತಾಳ್ಮೆಯಿಂದ ಚಿಂತಿಸಿ ಮುನ್ನಡೆಯಬೇಕು. ಚಿಂತೆಯನ್ನು ಬಿಟ್ಟು ಚಿಂತಿಸುವುದನ್ನು ಗುರು ಕಲಿಸುತ್ತಾನೆ. ಅಜ್ಞಾನದಿಂದ ಆನಂದದೆಡೆಗೆ ಕೊಂಡೊಯ್ಯುವ ಮಾರ್ಗದರ್ಶಕ ಗುರು. ಹೊರಜಗತ್ತಿನಲ್ಲಿ ಸುಖವನ್ನು ಹುಡುಕುವ ಮನುಷ್ಯನಿಗೆ ನಿಜವಾದ ಆನಂದ ತನ್ನೊಳಗೇ ಇದೆ ಎಂಬುದನ್ನು ಅರಿವು ಮೂಡಿಸುವವರು ಗುರುಗಳೇ. ಬದುಕಿನ ಮೊದಲ ಪಾಠ ತಂದೆ-ತಾಯಿಯಿಂದ ದೊರೆತರೆ, ಕೊನೆಯ ಪಾಠ ಗುರುವಿನಿಂದ ದೊರೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರ ಜೀವನದಲ್ಲೂ ಗುರುನಿಷ್ಠೆ ಅನಿವಾರ್ಯ ಎಂದು ನುಡಿದರು.


ಸೆಪ್ಟೆಂಬರ್ ೨೬ರವರೆಗೆ ವೈಭವದ ಚಾತುರ್ಮಾಸ್ಯ :
ಜುಲೈ 29ರಿಂದ ಸೆಪ್ಟೆಂಬರ್ 26ರವರೆಗೆ ನಡೆಯಲಿರುವ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ. ದೇಶ-ವಿದೇಶಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದೆ.


ಗುರುಗಳ ಸುವರ್ಣ ವರ್ಷ; 35 ಕೋಟಿ ಅಭಿವೃದ್ಧಿ ಯೋಜನೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ವಡೇರಹೋಬಳಿ ಶ್ರೀಧರ ಆಚಾರ್ಯ ಮಾತನಾಡಿ, ಜಗದ್ಗುರುಗಳ 50ನೇ ಜನ್ಮವರ್ಧಂತ್ಯುತ್ಸವದ ಅಂಗವಾಗಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸುಮಾರು ರೂ 10 ಕೋಟಿ ವೆಚ್ಚದಲ್ಲಿ ಶ್ರೀ ಗುರುಮಠ ಹಾಗೂ ರೂ 25 ಕೋಟಿ ವೆಚ್ಚದಲ್ಲಿ ಕೆರೆಯ ಮಧ್ಯೆ ಭವ್ಯ ದೇವಾಲಯ ನಿರ್ಮಾಣದ ಯೋಜನೆ ರೂಪುಗೊಂಡಿದ್ದು, ವಿಶ್ವಬ್ರಾಹ್ಮಣ ಸಮಾಜದ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ಹಂಪಿಯ ವೈಭವ ಅನಾವರಣ

ಈ ಬಾರಿಯ ಚಾತುರ್ಮಾಸ್ಯದ ಮತ್ತೊಂದು ವಿಶೇಷ ಆಕರ್ಷಣೆಯಾಗಿ “ಹಂಪಿ ವೈಭವ” ಪರಿಕಲ್ಪನೆಯ ಭವ್ಯ ವೇದಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಆನೆಗುಂದಿ–ಹಂಪಿಯ ಐತಿಹಾಸಿಕ ಪರಂಪರೆ, ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪ, ದೇವಾಲಯಗಳ ಗೋಪುರಗಳು ಹಾಗೂ ವಿಶ್ವವಿಖ್ಯಾತ ಕಲ್ಲಿನ ರಥದ ಪ್ರತಿರೂಪವನ್ನು ಒಳಗೊಂಡಿರುವ ಈ ವೇದಿಕೆ ಭಕ್ತರನ್ನು ವಿಜಯನಗರದ ಸುವರ್ಣ ಯುಗಕ್ಕೆ ಕರೆದೊಯ್ಯುವಂತೆ ವಿನ್ಯಾಸಗೊಳಿಸಲಾಗಿದೆ. ಸಾಂಪ್ರದಾಯಿಕ ಅಲಂಕಾರ, ಶಿಲ್ಪಕಲೆ ಹಾಗೂ ಬೆಳಕಿನ ವಿನ್ಯಾಸಗಳು ವೇದಿಕೆಗೆ ಮತ್ತಷ್ಟು ಮೆರುಗು ನೀಡಿವೆ. ಕಳೆದ ಹಲವು ವರ್ಷಗಳಿಂದ ಗುರುಕುಲ, ಸರಸ್ವತಿ ಬೆಟ್ಟದ ನಂದಿಮಂಟಪ, ಸರಸ್ವತಿ ಮಂದಿರ, ಅರಳಿಕಟ್ಟೆ ಸರಸ್ವತಿ ಗುಡಿ ಸೇರಿದಂತೆ ವಿಭಿನ್ನ ಪರಿಕಲ್ಪನೆಗಳ ವೇದಿಕೆಗಳನ್ನು ನಿರ್ಮಿಸುವ ಸಂಪ್ರದಾಯಕ್ಕೆ ಈ ಬಾರಿ “ಹಂಪಿ ವೈಭವ” ಮತ್ತೊಂದು ಸುವರ್ಣ ಅಧ್ಯಾಯವಾಗಿದೆ. ಮಂಗಳೂರು ಗುರುರಾಜ ಆಚಾರ್ಯ, ಹರೀಶ್ ಆಚಾರ್ಯ ಹಾಗೂ ಬೇಲಾಡಿಯ ಹರೀಶ್ ಆಚಾರ್ಯ ಅವರ ಕಲ್ಪನೆ, ಕುಸುರಿ ಕೆಲಸ ಹಾಗೂ ಕಲಾತ್ಮಕ ನೈಪುಣ್ಯದಿಂದ ರೂಪುಗೊಂಡ ಈ ವೇದಿಕೆ ಚಾತುರ್ಮಾಸ್ಯಕ್ಕೆ ಆಗಮಿಸುವ ಸಹಸ್ರಾರು ಭಕ್ತರ ಪ್ರಮುಖ ಆಕರ್ಷಣೆಯಾಗಿದೆ


ಗಣ್ಯರ ಉಪಸ್ಥಿತಿ

ವೇದಿಕೆಯಲ್ಲಿ ವ್ರತ ನಿರ್ವಹಣಾ ಸಮಿತಿಯ ಗೌರವಾಧ್ಯಕ್ಷ ಪಿ.ವಿ. ಗಂಗಾಧರ ಆಚಾರ್ಯ, ಪಂಚಸಿಂಹಾಸನ ಸರಸ್ವತೀ ಪೀಠ ವಿಕಾಸ ಸಮಿತಿಯ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ರವಿ ಆಚಾರ್ಯ ಕಾರ್ಕಳ, ಚಂದ್ರಯ್ಯ ಆಚಾರ್ಯ ಕಳಿ, ಮಧುಕರ ಚಂದ್ರಶೇಖರ ಆಚಾರ್ಯ ಹೊನ್ನಾವರ, ಗಜಾನನ ಎನ್. ಆಚಾರ್ಯ ನೀರಕಂಠ ಶಿರಾಲಿ, ಗಣೇಶ್ ಆಚಾರ್ಯ ಕಾಪು, ಬಿ.ಎಂ. ಯದುನಂದನ ಆಚಾರ್ಯ, ಜನಾರ್ದನ ಆಚಾರ್ಯ, ಎಂ. ಪುರುಷೋತ್ತಮ ಆಚಾರ್ಯ, ಸಿ.ಎ. ಶ್ರೀಧರ ಆಚಾರ್ಯ, ಹರೀಶ್ಚಂದ್ರ ಎನ್. ಆಚಾರ್ಯ, ಬಿ. ಸೂರ್ಯಕುಮಾರ್ ಆಚಾರ್ಯ, ಗಣೇಶ್ ಆಚಾರ್ಯ ಕೆಮ್ಮಣ್ಣು, ಸುಂದರ ಆಚಾರ್ಯ, ಸಂಧ್ಯಾಲಕ್ಷ್ಮಣ ಆಚಾರ್ಯ, ವಿದ್ವಾನ್ ಬ್ರಹ್ಮಶ್ರೀ ಕೇಶವ ಶರ್ಮಾ, ನಾಗರಾಜ ಆಚಾರ್ಯ, ವೇದಬ್ರಹ್ಮಶ್ರೀ ಸೋಮಯ್ಯಾಚಾರ್, ರಾಜೇಂದ್ರ ಆಚಾರ್ಯ ಹಾವೇರಿ, ಸುಭೇದಾರ್ ವೈ. ಧರ್ಮೇಂದ್ರ ಆಚಾರ್ಯ ಸೇರಿದಂತೆ ಗುರುಸೇವಾ ಪರಿಷತ್ತಿನ ಪ್ರಮುಖರು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ ವಂದಿಸಿದರು. ಕೆ.ಎಂ. ಗಂಗಾಧರ ಆಚಾರ್ಯ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು

administrator

Related Articles

Leave a Reply

Your email address will not be published. Required fields are marked *

You cannot copy content of this page