ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಉಡುಪಿ, ನ. ೨೫:ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘ (ರಿ.)ದ ದಶಮಾನೋತ್ಸವದ ಅಂಗವಾಗಿ ನವೆಂಬರ್ ೨೭ರಿಂದ ೨೯ರವರೆಗೆ ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ‘ಉಡುಪಿ ಆಹಾರ ಮತ್ತು ಉದ್ಯಮ ಮೇಳ-೨೦೨೬’ ಆಯೋಜಿಸಲಾಗಿದೆ ಎಂದು ಸಂಘದ ಕಾನೂನು ಸಲಹೆಗಾರ ಹಾಗೂ ಮೇಳದ ಪ್ರಧಾನ ಸಂಚಾಲಕ ಶ್ರೀಧರ್ ಪಿ.ಎಸ್. ತಿಳಿಸಿದ್ದಾರೆ.

ಬುಧವಾರ ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ಬೆಳಗ್ಗೆ ೧೦ರಿಂದ ರಾತ್ರಿ ೧೦ರವರೆಗೆ ನಡೆಯಲಿರುವ ಈ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು.
ಮೇಳದ ವಿಶೇಷತೆಗಳು:
ಯುವ ಉದ್ಯಮಿಗಳಿಗೆ ಮಾರ್ಗದರ್ಶನ: ಹೊಸ ಉದ್ಯಮ ಆರಂಭಿಸುವ ಯುವಕರಿಗೆ ಪರವಾನಗಿ ಹಾಗೂ ಉದ್ಯಮದ ಕುರಿತು ಮಾಹಿತಿ ನೀಡಲಾಗುವುದು. ಯುವಕರಿಗೆ ತರಬೇತಿ ನೀಡಲು ಬ್ರಹ್ಮಾವರದಲ್ಲಿ ತರಬೇತಿ ಕಟ್ಟಡ ನಿರ್ಮಿಸುವ ಉದ್ದೇಶವಿದ್ದು, ಮೇಳದಲ್ಲಿ ಸಚಿವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು.
ಪ್ರದರ್ಶನ ಮತ್ತು ಮಾರಾಟ: ಆಹಾರೋದ್ಯಮದ ಯಂತ್ರೋಪಕರಣಗಳು, ನೂತನ ತಂತ್ರಜ್ಞಾನ, ಗೃಹೋಪಯೋಗಿ ವಸ್ತುಗಳು ಹಾಗೂ ಕೃಷಿ ಸಂಬಂಧಿತ ಮಳಿಗೆಗಳು ಇರಲಿವೆ. ಕರಾವಳಿಯ ಸಾಂಪ್ರದಾಯಿಕ ಖಾದ್ಯಗಳ ವಿಶೇಷ ಆಹಾರ ಮೇಳ ಮತ್ತು ಮನರಂಜನಾ ಆಟಗಳು ಪ್ರಮುಖ ಆಕರ್ಷಣೆಯಾಗಿವೆ.
ಮೂರು ದಿನಗಳ ಕಾರ್ಯಕ್ರಮಗಳ ವಿವರ:
ನ. 27: ಸಂಜೆ ೪.೩೦ಕ್ಕೆ ಬ್ರಹ್ಮಾವರದ ಕುಂಜಾಲು ಸರ್ಕಲ್‌ನಿಂದ ಹಳೆ ಬಸ್ ನಿಲ್ದಾಣದ ಮೂಲಕ ಗಾಂಧಿ ಮೈದಾನದವರೆಗೆ ಭವ್ಯ ಪುರಮೆರವಣಿಗೆ ನಡೆಯಲಿದೆ. ಸಂಜೆ ೬ಕ್ಕೆ ಅರೆಹೊಳೆ ಪ್ರತಿಷ್ಠಾನ ಹಾಗೂ ಮಂಗಳೂರಿನ ನಂದಗೋಕುಲ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 7ಕ್ಕೆ ‘ದಶರುಚಿ-೨೦೨೬’ ದಶಮಾನೋತ್ಸವ ಸಭಾ ಕಾರ್ಯಕ್ರಮ ಹಾಗೂ 8.30ಕ್ಕೆ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ.
ನ. 28: ಸಂಜೆ ೫.೪೫ರಿಂದ ಯಕ್ಷಗಾನ, ನಾಟ್ಯ, ಹಾಸ್ಯ ಕಾರ್ಯಕ್ರಮಗಳು, ರಾತ್ರಿ ೮ಕ್ಕೆ ‘ದಶರುಚಿ’ ಸಿಂಹಾವಲೋಕನ ಸಭೆ ಹಾಗೂ 9.30ಕ್ಕೆ ವಿದ್ಯಾರ್ಥಿಗಳಿಂದ ‘ವಿನಾದ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ನ. 29: ಸಂಜೆ ೬ಕ್ಕೆ ಸಂಗೀತ ಕಾರ್ಯಕ್ರಮ, ರಾತ್ರಿ ೭ಕ್ಕೆ ಸಚಿವರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ರಾತ್ರಿ ೮.೩೦ಕ್ಕೆ ‘ಉಡುಪಿ ಸರಿಗಮಪ’ ಸಂಗೀತ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಹಾಗೂ ಖ್ಯಾತ ಗಾಯಕರಿಂದ ರಸಮಂಜರಿ ಕಾರ್ಯಕ್ರಮವಿರಲಿದೆ.
ಸಾಧಕರಿಗೆ ಪ್ರಶಸ್ತಿ: ದಶಮಾನೋತ್ಸವದ ಪ್ರಯುಕ್ತ ಆಹಾರೋದ್ಯಮ ಮತ್ತು ಉದ್ಯಮ ಕ್ಷೇತ್ರದ ಸಾಧಕರಿಗೆ ‘ಆಹಾರೋದ್ಯಮ ರತ್ನ’ ಹಾಗೂ ‘ಉದ್ಯಮ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ವಿಶ್ವನಾಥ ಕುಲಾಲ್, ದಶಮಾನೋತ್ಸವ ಸಮಿತಿ ಅಧ್ಯಕ್ಷ ಹೆರಾಲ್ಡ್ ಡಿಸೋಜ, ಕೋಶಾಧಿಕಾರಿ ಶಶಿಕಾಂತ್ ಜಿ. ನಾಯಕ್ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ದಿವಾಕರ ಸನಿಲ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸತ್ಯಪ್ರಕಾಶ್ ಶೆಣೈ ವಂದಿಸಿದರು


