• February 9, 2026
  • Last Update February 2, 2026 6:06 pm
  • Brahmavara

ರಾ.ಹೆ. ಅಗಲೀಕರಣ – ಹಾನಿಗೊಳಗಾದ ಪೈಪ್‌ಲೈನ್ ದುರಸ್ಥಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ರಾ.ಹೆ. ಅಗಲೀಕರಣ – ಹಾನಿಗೊಳಗಾದ ಪೈಪ್‌ಲೈನ್ ದುರಸ್ಥಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಉಡುಪಿಮಿತ್ರ ಪತ್ರಿಕೆ ಸುದ್ದಿ:

ಉಡುಪಿ ಜನವರಿ ೧: ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿಯ ಹಿನ್ನೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರು ಸರಬರಾಜಿನ ಪೈಪ್‌ಲೈನ್ ಹಾನಿಗೊಳಗಾಗಿದ್ದು, ದುರಸ್ಥಿ ಹಾಗೂ ಮರುಅಳವಡಿಕೆ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಬೇಕೆಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.


ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆಯಲ್ಲಿ ಆದ ಹಾನಿಯ ಕುರಿತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗಳನ್ನು ಕುಂದಾಪುರ ತಾಲೂಕಿನ ಕೋಟೇಶ್ವರ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ ಹಾಗೂ ಬ್ರಹ್ಮಾವರದ ಸಾಲಿಗ್ರಾಮ, ಕೋಟತಟ್ಟು, ಕೋಟ, ಮಣೂರು, ಪಾಂಡೇಶ್ವರ ಹಾಗೂ ಸಾಸ್ತಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿ ಕೈಗೊಂಡಿರುವ ಸಾರ್ವಜನಿಕ ಕುಡಿಯುವ ನೀರು ಸರಬರಾಜಿನ ಪೈಪ್‌ಲೈನ್‌ಗಳು ಹಾನಿಗೊಂಡು ಸಾರ್ವಜನಿಕರ ಕುಡಿಯುವ ನೀರಿಗೆ ತೊಂದರೆ ಉಂಟಾಗುತ್ತಿದೆ. ಇವುಗಳ ದುರಸ್ಥಿ ಕಾರ್ಯಗಳನ್ನು ಆದ್ಯತೆಯ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಬೇಕೆಂದರು.
ಅಗಲೀಕರಣ ಕಾಮಗಾರಿಯಿಂದ ಮುಂಬರುವ ದಿನಗಳಲ್ಲಿ ಪೈಪ್‌ಲೈನ್ ಹಾನಿಗೊಳಗಾಗುವ ಸಾಧ್ಯತೆಗಳಿವೆ. ಅಲ್ಲದೇ ಪೈಪ್‌ಲೈನ್‌ಗಳು ರಸ್ತೆ ಕ್ಯಾರೇಜ್ ವೇ ಮಧ್ಯದಲ್ಲಿ ಬರುತ್ತಿರುವುದರಿಂದ ಪ್ರತ್ಯೇಕ ಪೈಪ್‌ಲೈನ್ ಅಳವಡಿಕೆ ಅವಶ್ಯಕತೆ ಇದೆ. ದುರಸ್ಥಿ ಹಾಗೂ ಪ್ರತ್ಯೇಕ ಪೈಪ್‌ಲೈನ್ ಅಳವಡಿಕೆಗೆ ಗ್ರಾಮ ಪಂಚಾಯತ್‌ಗಳಲ್ಲಾಗಲಿ, ಗ್ರಾಮೀಣಾಭೀವೃದ್ಧಿ ಇಲಾಖೆಯಿಂದ ಅನುದಾನದ ಲಭ್ಯತೆ ಇಲ್ಲದೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ದುರಸ್ಥಿ ಸೇರಿದಂತೆ ಮತ್ತಿತರ ಕಾರ್ಯಗಳನ್ನು ಕೈಗೊಳ್ಳಬೇಕಿದೆ ಎಂದರು.
ಹಾಲಿ ರಸ್ತೆ ಮಧ್ಯ ಭಾಗದಲ್ಲಿರುವ ಪೈಪ್‌ಲೈನ್‌ಗಳ ಬದಲಿಯಾಗಿ ಹೊಸದಾಗಿ ಪೈಪ್‌ಲೈನ್ ಕಾಮಗಾರಿಗಳನ್ನು ಸರ್ವೀಸ್ ರಸ್ತೆಯಲ್ಲಿ ಬಾಕಿ ಉಳಿದಿರುವ ೨.೫ ಮೀಟರ್ ಜಾಗದಲ್ಲಿ ಅಳವಡಿಸುವುದು ಸೂಕ್ತ ಎಂದರು.
ಪ್ರಸ್ತುತ ದುರಸ್ಥಿ ಸೇರಿದಂತೆ ಹೊಸ ಪೈಪ್‌ಲೈನ್‌ಗಳನ್ನು ಅಳವಡಿಸಲು ತಯಾರಿಸಿರುವ ಅಂದಾಜು ಪಟ್ಟಿಯ ವೆಚ್ಚ ಹೆಚ್ಚಿದ್ದು, ಈ ಬಗ್ಗೆ ಮರು ಪರಿಶೀಲಿಸಿ, ಸರಿಯಾಗಿ ಅಂದಾಜು ವೆಚ್ಚ ತಯಾರಿಸಿ ನೀಡಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರುಗಳಿಗೆ ತಿಳಿಸಿದ ಅವರು, ಇಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೈಗೊಂಡ ನಿರ್ಣಯದ ನಡವಳಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಭಾಗೀಯ ಕಚೇರಿಗೆ ಕಳುಹಿಸುವಂತೆ ಸೂಚನೆ ನೀಡಿದರು. ಗೋಪಾಡಿಯಲ್ಲಿ ೨೩ ಲಕ್ಷದಷ್ಟು ಪೈಪ್ ಲೈನ್ ನಷ್ಟವಾಗಿದೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದರು.
ಶಾಸಕ ಕಿರಣ್‌ಕುಮಾರ್ ಕೊಡ್ಗಿ ಮಾತನಾಡಿ ಐರೋಡಿಯಲ್ಲಿ ೧.೨೫ ಕೋಟಿ ನಷ್ಟವಾಗಿದೆ ಎಂದು ಎಸ್ಟಿಮೇಶನ್ ನೀಡಿದ್ದೀರಲ್ಲ. ನೈಜ ನಷ್ಟವನ್ನು ಮಾತ್ರ ಕೊಡಿ ಎಂದು ಸೂಚಿಸಿದರು. ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ಮಾಡುವಾಗ ಗ್ರಾಮ ಪಂಚಾಯತ್ ಅಧಿಕಾರಿಗಳು ಗಮನ ಹರಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಶಾಸಕರುಗಳಾದ ಯಶ್‌ಪಾಲ್ ಎ ಸುವರ್ಣ ಹಾಗೂ ಎ. ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸಹಾಯಕ ಕಮೀಷನರ್ ರಶ್ಮಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆಯ ಅಭಿಯಂತರರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *