ವರದಿ : ಚಿತ್ತೂರು ಪ್ರಭಾಕರ ಆಚಾರ್ಯ , ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಸಿದ್ಧಾಪುರ, ಮಾ.೧೧: ಅಂಪಾರು ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ರೈತ ಸೌಧ ಮಾರ್ಚ್ 14ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ನುಡಿದರು. ಅವರು ನೂತನ ಕಟ್ಟಡದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಭಾಭವನದಲ್ಲಿ ಮಾ.11 ರಂದು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

1997-98ರಲ್ಲಿ ಶಂಕರನಾರಾಯಣ ಸಂಘದಿಂದ ವಿಭಜನೆಗೊಂಡು ಸ್ವಂತ ಸಂಘವಾಗಿ ಅಂಪಾರು ಸಹಕಾರಿ ಸಂಘ ರಚನೆಗೊಂಡ ನಂತರ ಸ್ವಂತ ಶಕ್ತಿಯ ಮೇಲೆ ಸಂಘ ಸಾಕಷ್ಟು ಬೆಳೆದು ನಿಂತಿದೆ. ಹಲವಾರು ಹಿರಿಯರು ಸಂಘವನ್ನು ಕಟ್ಟಿ ಬೆಳೆಸಲು ಶ್ರಮಿಸಿದ್ದಾರೆ. ಸಂಘವು 55.87 ಕೋಟಿ ಠೇವಣಾತಿ ಹೊಂದಿದ್ದು 55.78 ಕೋಟಿ ಸಾಲವನ್ನು ವಿತರಿಸಿದೆ. ಒಂದು ಗ್ರಾಮಕ್ಕೆ ಸೀಮಿತವಾದ ಸಂಸ್ಥೆಯಾದರೂ ದೊಡ್ಡ ಮಟ್ಟದ ವ್ಯವಹಾರ ಮಾಡುತ್ತಿದೆ. ೩೬೦೮ ಎ ತರಗತಿಯ ಸದಸ್ಯರಿಂದ ೨೨ಕೋಟಿ೧ಲಕ್ಷ ಪಾಲು ಬಂಡವಾಳ ಹೊಂದಿ ಸದೃಢವಾಗಿ ಬೆಳೆದು ನಿಂತಿದೆ. ಈಗಿರುವ ಕಟ್ಟಡದಲ್ಲಿ ಜಾಗದ ಕೊರತೆ ಇರುವುದರಿಂದ ಸಂಘದ ಮುಂದಿನ ೫೦ ವರ್ಷಗಳನ್ನು ಗಮನದಲ್ಲಿರಿಸಿಕೊಂಡು ಹಿಂದಿನ ಆಡಳಿತ ಮಂಡಳಿಯವರು ಹೊಸಕಟ್ಟಡದ ಕಾಮಗಾರಿಯ ಎಸ್ಟಿಮೇಶನ್ ತಯಾರು ಮಾಡಿ ಪ್ರಾರಂಭಿಸಿದ್ದು ಇದೀಗ ನಮ್ಮ ಆಡಳಿತ ಮಂಡಳಿಯ ಅವಧಿಯಲ್ಲಿ ಸುಸಜ್ಜಿತ ಕಟ್ಟಡದ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಕುಂದಾಪುರ ತಾಲೂಕಿನಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲೇ ನಮ್ಮ ಕಟ್ಟಡ ಸುಂದರ ಕಟ್ಟಡವಾಗಿ ನಿರ್ಮಾಣಗೊಂಡಿದೆ. ನೆಲಮಹಡಿಯಲ್ಲಿ ರೈತರ ಅನುಕೂಲಕ್ಕೆ ಗೋದಾಮು ಹಾಗೂ ಪಡಿತರ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಥಮ ಮಹಡಿಯಲ್ಲಿ ಗಣಕೀಕೃತ ಬ್ಯಾಂಕಿಂಗ್ ಹಾಗೂ ಇ ಸ್ಟ್ಯಾಂಪ್ ವ್ಯವಸ್ಥೆಯನ್ನು, ದ್ವಿತೀಯ ಮಹಡಿಯಲ್ಲಿ ಸಹಕಾರಿ ರತ್ನ ಎಂ.ಎನ್.ರಾಜೇಂದ್ರ ಕುಮಾರ್ ಹೆಸರಲ್ಲಿ ೩೦೦ ಜನ ಕುಳಿತುಕೊಳ್ಳಬಹುದಾದ ಸಭಾಂಗಣ ನಿರ್ಮಿಸಲಾಗಿದ್ದು ಮಾರ್ಚ್ 14ರಂದು ಉದ್ಘಾಟನೆಗೊಳ್ಳಲಿದೆ ಎಂದರು.

ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ ಉದ್ಘಾಟನಾ ಸಮಾರಂಭದ ಅಂಗವಾಗಿ ಸಾಂಸ್ಕೃತಿಕ ವೈಭವ ನಡೆಯಲಿದ್ದು ಬೆಳಿಗ್ಗೆ 9.30 ರಿಂದ 10.45 ರ ತನಕ ನಿನಾದ ಮ್ಯೂಸಿಕಲ್ ಇವೆಂಟ್ಸ್ ನವರಿಂದ ಸಂಗೀತ ವೈಭವ, ಮಧ್ಯಾಹ್ನ 1.00ರಿಂದ ಅರೆಹೊಳೆ ಪ್ರತಿಷ್ಟಾನ ಮಂಗಳೂರು ಇದರ ನಂದಗೋಕುಲ ಕಲಾವಿದರಿಂದ ನೃತ್ಯ ವೈಭವ, ಮಧ್ಯಾಹ್ನ 3.00ರಿಂದ ಯಕ್ಷಗಾನ ವೈಭವ ಮಾಗಧ ವಧೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕರಾದ ಮೋಹನ ವೈದ್ಯ, ಅರುಣ್ ಕುಮಾರ್ ಶೆಟ್ಟಿ, ಮನೋಹರ ಶೆಟ್ಟಿ, ಜಯರಾಮ ಶೆಟ್ಟಿ, ಉಮೇಶ್ ಕೊಠಾರಿ, ಅಜಿತ್ ಕುಮಾರ್, ಶ್ರೀಮತಿ ಜ್ಯೋತಿ ಉದಯ್ ಕುಮಾರ್ ಶೆಟ್ಟಿ, ಶ್ರೀಮತಿ ಬಾಲಕೃಷ್ಣ ಶೇಟ್, ಮಂಜುನಾಥ ನಾಯ್ಕ್, ಸುನಿಲ್ ಹಾಗೂ ವಲಯ ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.
ನಿರ್ದೇಶಕ ಅಂಪಾರು ಕಿರಣ ಕುಮಾರ್ ಹೆಗ್ಡೆ ವಂದಿಸಿದರು.



