ಉಡುಪಿಮಿತ್ರ ಪತ್ರಿಕೆ ಸುದ್ಧಿ:
ಬ್ರಹ್ಮಾವರ, ಸೆ.24: ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರನ್ನು ಒರೆಸುವ ಕಾರ್ಯದಿಂದ ದೊರೆಯುವ ಸಂತೃಪ್ತಿ ಬೇರೆ ಯಾವುದರಿಂದಲೂ ಸಿಗದು. ಈ ನಿಟ್ಟಿನಲ್ಲಿ ಸಮಾನ ಮನಸ್ಕರ ತಂಡವು ೪೨ ಮನೆಗಳನ್ನು ನಿರ್ಮಿಸಿ 42ಕುಟುಂಬಗಳಿಗೆ ನೆರಳನ್ನು ಒದಗಿಸಿರುವುದು ಶ್ಲಾಘನೀಯ ಹಾಗೂ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಬೈಕಾಡಿ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಹೇಳಿದರು.

ಬೈಕಾಡಿ ಗಾಂಧಿನಗರದಲ್ಲಿ ಶಶಿಧರ ಪುರೋಹಿತರ ನೇತೃತ್ವದ ಸಮಾನ ಮನಸ್ಕರ ತಂಡವು ಶ್ರೀಮತಿ ವಿಜಯಲಕ್ಷ್ಮೀ ಅಶೋಕ್ ಅವರಿಗೆ ನಿರ್ಮಿಸಿಕೊಟ್ಟ ಮನೆಯ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗೋಲ್ಡ್‌ಸ್ಮಿತ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಪೆರ್ಡೂರು ಉಪೇಂದ್ರ ಆಚಾರ್ಯ ಮಾತನಾಡಿ, ಉತ್ತಮ ಸಂಕಲ್ಪವೊಂದು ಒಳ್ಳೆಯ ಕಾರ್ಯಕ್ಕೆ ಪ್ರೇರಣೆ ನೀಡಿ ದೊಡ್ಡ ಸಾಧನೆಗೆ ಕಾರಣವಾಗುತ್ತದೆ ಎಂಬುದಕ್ಕೆ ಶಶಿಧರ ಪುರೋಹಿತರ ನೇತೃತ್ವದಲ್ಲಿ ನಡೆಯುತ್ತಿರುವ ಮನೆ ನಿರ್ಮಾಣ ಕಾರ್ಯ ಸಾಕ್ಷಿಯಾಗಿದೆ. ತಂಡದಲ್ಲಿ ಶ್ರೀಮಂತರಿಗಿಂತಲೂ ಹೃದಯ ಶ್ರೀಮಂತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಸಹಕಾರ ಮತ್ತು ಸಂಕಲ್ಪದಿಂದ 42ಮನೆಗಳನ್ನು ನಿರ್ಮಿಸಲು ಸಾಧ್ಯವಾಗಿದೆ ಎಂದರು.

ಶಶಿಧರ ಪುರೋಹಿತರು ಮಾತನಾಡಿ, ಸಮಾನ ಮನಸ್ಕರ ತಂಡದಲ್ಲಿರುವ ಹೃದಯವಂತರು ನೀಡಿದ ಸಹಕಾರದಿಂದ ಮನೆ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲು ಸಾಧ್ಯವಾಗಿದೆ ಎನ್ನುತ್ತಾ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ಉಡುಪಿ ಜಿಲ್ಲಾ ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಾಳಿ, ನಾಗೇಶ್ ಆಚಾರ್ಯ ಸಂತೆಕಟ್ಟೆ, ವಾಸು ಆಚಾರ್ಯ ಪರ್ಕಳ, ದಿನೇಶ್ ಆಚಾರ್ಯ ಉಪ್ಪೂರು ಹಾಗೂ ಬಿ.ಎ. ಆಚಾರ್ಯ ಮಣಿಪಾಲ ಶುಭ ಹಾರೈಸಿದರು.
ಇದೇ ಸಂದರ್ಭ ಮನೆಯ ಫಲಾನುಭವಿ ವಿಜಯಲಕ್ಷ್ಮೀ ಅಶೋಕ್ ಅವರು ಸಮಾನ ಮನಸ್ಕರಿಗೆ ಕೃತಜ್ಞತೆ ಅರ್ಪಿಸಿ ಶಶಿಧರ ಪುರೋಹಿತರನ್ನು ಗೌರವಿಸಿದರು.

ಯಜ್ಞನಾಥ ಆಚಾರ್ಯ ದಾನಿಗಳನ್ನು ಪರಿಚಯಿಸಿದರು. ವೆಂಕಟೇಶ್ ಆಚಾರ್ಯ ಸ್ವಾಗತಿಸಿದರು. ದಿವಾಕರ ಆಚಾರ್ಯ ವಂದಿಸಿದರು. ಪ್ರತಿಮಾ ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು



