ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕುಂದಾಪುರ,ಸೆ.8: ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಅ.4 ರಂದು ಚಿತ್ರಕೂಟ ಆಯುರ್ವೇದ ಹಬ್ಬ ನಡೆಯಲಿದ್ದು ಈಗಾಗಲೆ ಸಕಲ ಸಿದ್ದತೆ ನಡೆದಿದೆ.
ವಿದ್ಯಾರ್ಥಿಗಳಿಗೆ ಭಾಷಣ, ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ
ಚಿತ್ರಕೂಟ ಆಯುರ್ವೇದ ಹಬ್ಬ ಅಂಗವಾಗಿ ಉಡುಪಿ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.
ಭಾಷಣ ಸ್ಪರ್ಧೆ 5ರಿಂದ 7ನೇ ತರಗತಿ ಹಾಗೂ 8-10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಯಲಿದ್ದು ಪ್ರಸ್ತುತ ಕಾಲಘಟ್ಟದಲ್ಲಿ ಆಯುರ್ವೇದದ ಮಹತ್ವ ಎಂಬ ವಿಷಯದಲ್ಲಿ 3+1 ನಿಮಿಷದ ಕಾಲಾವಕಾಶದಲ್ಲಿ ಭಾಷಣ ಮಾಡಬೇಕು.
ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಸಾಂಪ್ರದಾಯಿಕ ಆಹಾರ ಮತ್ತು ಆಯುರ್ವೇದದ ಪಾತ್ರ ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ನಡೆಯಲಿದ್ದು 5ರಿಂದ 7ನೇ ತರಗತಿ ಹಾಗೂ 8-10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. 1 ಗಂಟೆ ಕಾಲಾವಕಾಶ ನೀಡಲಾಗಿದೆ.
ಪ್ರಕೃತಿ ಮತ್ತು ಆಯುರ್ವೇದ ಎಂಬ ವಿಷಯದಲ್ಲಿ ಚಿತ್ರಕಲೆ ಸ್ಪರ್ಧೆ ನಡೆಯಲಿದ್ದು 1ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆ ನಡೆಯಲಿದೆ.
ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ರೂ.3,೦೦೦/, ದ್ವಿತೀಯ ಬಹುಮಾನ ರೂ.2೦೦೦, ತೃತೀಯ ಬಹುಮಾನ ರೂ.1೦೦೦ ನೀಡಲಾಗುವುದು.

ವಿವಿಧ ಸ್ಟಾಲ್‌ಗಳು :
ಆಯುರ್ವೇದ ಹಬ್ಬದಲ್ಲಿ ವಿವಿಧ ಮಾರಾಟ ಮಳಿಗೆಗಳು ಆಗಮಿಸಲಿದ್ದು ವಿಶೇಷವಾಗಿ ಆಯುರ್ವೇದದ ಫುಡ್ ಕೌಂಟರ್ ತೆರೆಯಲಾಗುವುದು. ನೀರಾ, ಗೋಲಿ ಸೋಡ, ಸ್ವದೇಶಿ ಉತ್ಪನ್ನಗಳು, ನ್ಯಾಚುರಲ್ ಐಸ್‌ಕ್ರೀಂ, ಸದ್ಗುರು ಆಯುರ್ವೇದ ಉತ್ಪನ್ನಗಳು, ಆರ್.ಕೆ. ಉಪ್ಪಿನಕಾಯಿ, ಹುಬ್ಬಳ್ಳಿ ಹಾಗೂ ತುಮುಕೂರಿನಿಂದ ವಿವಿಧ ಆರ್ಗ್ಯಾನಿಕ್ ಉತ್ಪನ್ನಗಳು, ಗೋವು ಉತ್ಪನ್ನಗಳು, ಮರದ ಉತ್ಪನ್ನಗಳು, ತರಕಾರಿ ಬೀಜಗಳು, ಆತ್ಮಿಕ ಆಯುರ್ವೇದಿಕ್ ಉತ್ಪನ್ನಗಳ ಸ್ಟಾಲ್‌ಗಳನ್ನು ತೆರೆಯಲಾಗುವುದು.
ಪೂರ್ವಾಹ್ನ 9.30ಕ್ಕೆ ಆಯುವೇದ ಹಬ್ಬದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ, ಕುಂದಾಪುರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಚರ್ಮ ರೋಗ ತಜ್ಞ ಡಾ| ಉಮೇಶ್ ಪುತ್ರನ್, ಬಾಂಡ್ಯ ಎಜುಕೇಶನ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಅನುಪಮಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭದ ನಂತರ ಯುವಜನತೆ-ವೈದ್ಯರ ನಡುವೆ ಮುಕ್ತ ವಿಚಾರ ಸಂಕಿರಣ ನಡೆಯಲಿದೆ
ಸಂಜೆ ಗಂಟೆ 4.೦೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಹೈದರಬಾದ್‌ನ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಕುಂದಪ್ರಭ ವಾರ ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ, ಉಡುಪಿ ಜಿಲ್ಲೆ ಎ.ಎಫ್.ಐ ಅಧ್ಯಕ್ಷ ಡಾ.ಎನ್.ಟಿ.ಆಂಚನ್ ಭಾಗವಹಿಸಲಿದ್ದಾರೆ.
ಭಾನುವಾರದ ರಜಾ ದಿನ ಕುಟುಂಬ ಸಮೇತರಾಗಿ ಈ ಹಬ್ಬದಲ್ಲಿ ಹಳ್ಳಿಯ ಬದುಕನ್ನು ಕಣ್ತುಂಬಿಕೊಳ್ಳಲು ಅವಕಾಶ ಒದಗಿಸಲಾಗಿದೆ. ಅಂದು ವೈದ್ಯರಿಂದ ಉಚಿತ ನಾಡಿ/ದೇಹಪ್ರಕೃತಿ ಪರೀಕ್ಷೆ, ಗೋಮಾತೆ ಅಪ್ಪುಗೆ, ಹಿತ್ತಿಲ ಗಿಡಮೂಲಿಕೆಗಳ ಕಷಾಯ ಶಾಲೆ, ೨೫೦ಕ್ಕೂ ಹೆಚ್ಚು ಗಿಡಮೂಲಿಕೆಗಳ ಔಷಧ ವನ ನಡಿಗೆ, ಸಾಂಪ್ರದಾಯಿಕ ಮತ್ತು ಆರೋಗ್ಯ ಆಹಾರ ಮೇಳ-ಸಂತೆ ಹಾಗೂ ಪಂಚಕರ್ಮ ಚಿಕಿತ್ಸೆಗಳ ಪರಿಚಯ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ರೋಗ ನಿರೋಧಕ ಮನೆಮದ್ದುಗಳ ತಯಾರಿಕೆ ಪ್ರಾತ್ಯಕ್ಷಿಕೆ, ದೇಹ ಶುದ್ಧೀಕರಣ ಚಿಕಿತ್ಸಾ ವಿಧಾನಗಳನ್ನು ಪರಿಚಯಿಸಲಾಗುವುದು. ಪ್ರವೇಶ ಸಂಪೂರ್ಣ ಉಚಿತವಾಗಿದ್ದು ಹೆಚ್ಚಿನ ಮಾಹಿತಿಗೆ ಮೊ. 9187471578 ಸಂಪರ್ಕಿಸಬಹುದು ಎಂದು ಚಿತ್ರಕೂಟ ಆಯುರ್ವದ ಚಿಕಿತ್ಸಾಲಯದ ಆಡಳಿತ ನಿರ್ದೇಶಕ ಡಾ.ರಾಜೇಶ್ ಬಾಯರಿ ತಿಳಿಸಿದ್ದಾರೆ.



