udupimitra.in
  • August 9, 2026
  • Last Update August 9, 2026 1:50 pm
  • Brahmavara

ಬಾರಕೂರು ಸುಜ್ಞಾನ ನ್ಯಾಶನಲ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

ಬಾರಕೂರು ಸುಜ್ಞಾನ ನ್ಯಾಶನಲ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬಾರ್ಕೂರು, ಆಗಸ್ಟ್ 8:
ಸುಜ್ಞಾನ ನ್ಯಾಷನಲ್ ಪಿಯು ಕಾಲೇಜು, ಬಾರ್ಕೂರಿನ ವಿಮೆನ್ಸ್ ಫೋರಂ ವತಿಯಿಂದ ವಿದ್ಯಾರ್ಥಿನಿಯರಲ್ಲಿ ಆರೋಗ್ಯ, ವೈಯಕ್ತಿಕ ಸ್ವಚ್ಛತೆ, ಋತುಚಕ್ರದ ಆರೋಗ್ಯ, ಭಾವನಾತ್ಮಕ ಕ್ಷೇಮ ಹಾಗೂ ಆತ್ಮವಿಶ್ವಾಸದ ಕುರಿತು ಸಮಗ್ರ ಅರಿವು ಮೂಡಿಸುವ ಉದ್ದೇಶದಿಂದ “ಅರಿವು, ಆರೋಗ್ಯ ಮತ್ತು ಆತ್ಮವಿಶ್ವಾಸದ ಮೂಲಕ ಯುವ ಮನಸ್ಸುಗಳ ಸಬಲೀಕರಣ ಎಂಬ ಆಶಯದೊಂದಿಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.


ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಎನ್‌ಆರ್‌ಸಿ ವೈದ್ಯಕೀಯ ಅಧಿಕಾರಿ ಡಾ. ಧನ್ಯಾ ಎನ್. ಹೆಗ್ಡೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿನಿಯರಿಗೆ ಋತುಚಕ್ರದ ವೈಜ್ಞಾನಿಕ ಹಾಗೂ ಆರೋಗ್ಯಪೂರ್ಣ ನಿರ್ವಹಣೆಯ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.
ಋತುಚಕ್ರವು ಅನಾರೋಗ್ಯದ ಲಕ್ಷಣವಲ್ಲ, ಬದಲಾಗಿ ಮಹಿಳಾ ದೇಹದ ಸಹಜ ಜೈವಿಕ ಪ್ರಕ್ರಿಯೆಯಾಗಿದ್ದು, ಅದರ ಬಗ್ಗೆ ಮುಕ್ತವಾಗಿ ಹಾಗೂ ಆರೋಗ್ಯಕರ ಮನೋಭಾವದಿಂದ ಮಾತನಾಡುವ ವಾತಾವರಣ ನಿರ್ಮಾಣವಾಗಬೇಕು. ಸಮತೋಲಿತ ಆಹಾರ ಸೇವನೆಯು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ದೈಹಿಕ ಶಕ್ತಿ ಮತ್ತು ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಕಬ್ಬಿಣಾಂಶ, ಪ್ರೋಟೀನ್, ಕ್ಯಾಲ್ಸಿಯಂ, ಹಣ್ಣು, ತರಕಾರಿಗಳು ಹಾಗೂ ಸಾಕಷ್ಟು ನೀರನ್ನು ಸೇವಿಸಬೇಕು. ನಿಯಮಿತ ಹಾಗೂ ಸೂಕ್ತವಾದ ವ್ಯಾಯಾಮ, ಯೋಗ, ಸ್ಟ್ರೆಚಿಂಗ್ ಮತ್ತು ದೈಹಿಕ ಚಟುವಟಿಕೆಗಳು ದೇಹವನ್ನು ಚುರುಕಾಗಿರಿಸುವುದರ ಜೊತೆಗೆ ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸನ್ನು ಸಮತೋಲನದಲ್ಲಿಡಲು ಸಹಕಾರಿಯಾಗಲಿದೆ.


ಋತುಚಕ್ರದ ಅವಧಿಯಲ್ಲಿ ಮನಸ್ಥಿತಿಯಲ್ಲಿ ಬದಲಾವಣೆ, ದಣಿವು, ಆತಂಕ ಅಥವಾ ಅಸಹಜ ಭಾವನೆಗಳು ಕಂಡುಬಂದಾಗ ಅವುಗಳನ್ನು ನಿರ್ಲಕ್ಷಿಸದೆ, ವಿಶ್ವಾಸಾರ್ಹ ಪೋಷಕರು, ಶಿಕ್ಷಕರು ಅಥವಾ ಅಗತ್ಯವಿದ್ದಲ್ಲಿ ತಜ್ಞರೊಂದಿಗೆ ವಿದ್ಯಾರ್ಥಿನಿಯರು ಮಾತನಾಡಿ ಸಲಹೆ ಪಡೆಯಬೇಕು. ಕುಟುಂಬ, ಶಿಕ್ಷಕರು ಮತ್ತು ಸ್ನೇಹಿತರಿಂದ ದೊರೆಯುವ ಭಾವನಾತ್ಮಕ ಹಾಗೂ ನೈತಿಕ ಬೆಂಬಲ ವಿದ್ಯಾರ್ಥಿನಿಯರ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ಸಹಜ ದೈಹಿಕ ಪ್ರಕ್ರಿಯೆಯ ಕಾರಣದಿಂದ ತಮ್ಮ ಶೈಕ್ಷಣಿಕ ಗುರಿಗಳನ್ನು ಅಥವಾ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು ಡಾ. ಧನ್ಯಾ ಎನ್. ಹೆಗ್ಡೆ ತಿಳಿಸಿದರು.

ಕಾರ್ಯಕ್ರಮದ ಗೌರವ ಅತಿಥಿ ಹಾಗೂ ಸುಜ್ಞಾನ ಎಜುಕೇಷನಲ್ ಟ್ರಸ್ಟ್‌ನ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಆರೋಗ್ಯ ಮತ್ತು ಶಿಕ್ಷಣ ಎರಡೂ ಪರಸ್ಪರ ಪೂರಕವಾಗಿವೆ ಎಂದು ಹೇಳಿದರು. ಪ್ರಸ್ತುತ ಪಿಯು ಹಂತವು ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ನಿರ್ಣಾಯಕ ಹಂತವಾಗಿದ್ದು, ಮುಂದಿನ ಶೈಕ್ಷಣಿಕ ಮತ್ತು ವೃತ್ತಿಜೀವನದ ದಿಕ್ಕನ್ನು ನಿರ್ಧರಿಸುವ ಜೀವನದ ಪ್ರಮುಖ ಘಟ್ಟವಾಗಿದೆ. ವಿದ್ಯಾರ್ಥಿಗಳು ಈ ಹಂತದ ಮಹತ್ವವನ್ನು ಅರಿತುಕೊಂಡು, ಎದುರಾಗುವ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಆರೋಗ್ಯವಂತ ಮನಸ್ಸು ಮತ್ತು ಆರೋಗ್ಯವಂತ ದೇಹವೇ ಉತ್ತಮ ಶೈಕ್ಷಣಿಕ ಸಾಧನೆ ಹಾಗೂ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಭದ್ರ ಬುನಾದಿ ಎಂದು ಭರತ್ ಶೆಟ್ಟಿ ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಆಚಾರ್ಯ ಹಾಗೂ ವಿಮೆನ್ಸ್ ಫೋರಂನ ಸಂಚಾಲಕರಾದ ಅನುಪಮಾ ಶೆಟ್ಟಿ ಉಪಸ್ಥಿತರಿದ್ದರು.
ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪ್ರಾರ್ಥಿಸಿದ್ದು ವಿದ್ಯಾರ್ಥಿನಿ ಫಾತಿಮಾ ಅರ್ಫಾ ನಿರೂಪಿಸಿದರು. ನಿಖಿತಾ ಸ್ವಾಗತಿಸಿದ್ದು ರಿಯಾ ಸಂಪನ್ಮೂಲ ವ್ಯಕ್ತಿ ಹಾಗೂ ಗಣ್ಯರನ್ನು ಪರಿಚಯಿಸಿದರು. ಭೂಮಿಕಾ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page