- ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಸಾಮಾಜಿಕ ಕಳಕಳಿ, ನಿರಂತರ ಹೋರಾಟ ಮನೋಭಾವ ಹಾಗೂ ನಿಸ್ಪೃಹ ಸೇವೆಯಿಂದ ಸಮಾಜದಲ್ಲಿ ನೆಮ್ಮದಿಯ ಬೆಳಕು ಚೆಲ್ಲುತ್ತಿರುವ ಅಪರೂಪದ ವ್ಯಕ್ತಿತ್ವ ಕೀಳಂಜೆ ಸತೀಶ್ ಪೂಜಾರಿಯವರದ್ದು. ಎಲ್ಲಿಯೇ ಯಾವುದೇ ಸಾರ್ವಜನಿಕ ಸಮಸ್ಯೆ ಎದುರಾದರೂ ಅಲ್ಲಿಯ ಚಿತ್ರವನ್ನು ತಕ್ಷಣ ಸಂಬಂಧಪಟ್ಟ ಅಧಿಕಾರಿಗೆ ಕಳುಹಿಸಿ ಆ ಸಮಸ್ಯೆ ಬಗೆ ಹರಿಸುವರೆಗೂ ಛಲ ಬಿಡದೆ ಹೋರಾಡುತ್ತಾರೆ. ಅಧಿಕಾರಿಗಳ ಬೆನ್ನು ಬಿದ್ದು ಕೆಲಸ ಸಾಧಿಸುವ ಈ ಛಲಗಾರ ೧೫ ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ ಬಂದಿದ್ದು ಉತ್ತಮ ಸಾಮಾಜಿಕ ಕಾರ್ಯಕರ್ತರಾಗಿ, ಸಮಾಜಸೇವಕರಾಗಿ ಗುರುತಿಸಿಕೊಂಡಿದ್ದಾರೆ
ದಿ. ನಾರಾಯಣ ಪೂಜಾರಿ ಹಾಗೂ ಕಮಲ ದಂಪತಿಯ ಪುತ್ರರಾದ ಅವರು ವೃತ್ತಿಯಲ್ಲಿ ಬಿಲ್ಡಿಂಗ್ ಕಾಂಟ್ರಾಕ್ಟರ್ ಮತ್ತು ಲ್ಯಾಂಡ್ ಲಿಂಕ್ಸ್ ವ್ಯವಹಾರ ನಡೆಸುತ್ತಿದ್ದಾರೆ. ತಮ್ಮ ದುಡಿಮೆಯ ಒಂದಷ್ಟು ಭಾಗವನ್ನು ಸಮಾಜ ಸೇವೆಗೂ ಮೀಸಲಿಡುತ್ತಿರುವ ಇವರು, ಅತ್ಯಂತ ಭಾವನಾಜೀವಿ ಹಾಗೂ ಬಡವರ ಕಷ್ಟಕ್ಕೆ ಮಿಡಿಯುವ ಗುಣವುಳ್ಳವರು. ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವುದು ಜವಾಬ್ದಾರಿಯುತ ನಾಗರಿಕರ ಕರ್ತವ್ಯ ಎಂದು ಪ್ರತಿಪಾದಿಸುವ ಇವರು, ಮಾಧ್ಯಮಗಳ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದು ನೂರಾರು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ.
ಸಮಾಜ ಸೇವೆಯ ಪ್ರಮುಖ ಹೆಜ್ಜೆಗಳು:
ತ್ರಿವರ್ಣ ವಿಶ್ವ ವೇದಿಕೆ ಸ್ಥಾಪನೆ:
ಸಾರ್ವಜನಿಕ ಕುಂದುಕೊರತೆಗಳ ನಿವಾರಣೆಗೆ ಸ್ಥಳೀಯ ಸಮಾನಮನಸ್ಕರನ್ನು ಒಗ್ಗೂಡಿಸಿ ತ್ರಿವರ್ಣ ವಿಶ್ವ ವೇದಿಕೆ ಸಂಸ್ಥೆಯನ್ನು ಸ್ಥಾಪಿಸಿ, ಸಂಘಟನೆ ಹೆಸರಲ್ಲಿ ಅರ್ಜಿ ಸಲ್ಲಿಸಿ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುತ್ತಾ ಬಂದಿದ್ದಾರೆ.
ಕೆ.ಜಿ ರೋಡ್-ಪೆರ್ಡೂರು ರಸ್ತೆ ಅಭಿವೃದ್ಧಿ, ಅಪಾಯಕಾರಿ ಮರಗಳ ಹಾಗೂ ತಿರುವುಗಳ ತೆರವು, ಮಣಿಪಾಲ-ಶೀಂಬ್ರಾ ರಸ್ತೆ ಹಾಗೂ ಕೊಳಲಗಿರಿ-ಮಣಿಪಾಲ ರಸ್ತೆ ಅಭಿವೃದ್ಧಿಗಾಗಿ ನಿರಂತರ ಹೋರಾಟ ನಡೆಸಿದ್ದಾರೆ. ಸಂತೆಕಟ್ಟೆ ಬಸ್ ನಿಲ್ದಾಣದ ಸಮಸ್ಯೆ ಮತ್ತು ಕೆಜಿ ರೋಡ್ ಮಾರ್ಗವಾಗಿ ಉಡುಪಿಗೆ ನರ್ಮ್ (ಓUಖಒ) ಬಸ್ಸು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಹಾವಂಜೆ-ಹೆರ್ಗ ನದಿ ದಾಟಲು ದೋಣಿ ಇಲ್ಲದೆ ಇರುವುದನ್ನು ಗಮನಿಸಿ ಇಲಾಖಾಧಿಗಳನ್ನು ಸಂಪರ್ಕಿಸಿ ಸುಮಾರು ರೂ.೧ ಲಕ್ಷ ಮೊತ್ತದ ಫೈಬರ್ ದೋಣಿ ಒದಗಿಸಿದ್ದಾರೆ. ಕೀಳಂಜೆ ನೆರೆ ಕಾಲೋನಿಗೆ ಮೆಸ್ಕಾಂನಿಂದ ರೂ.೬ ಲಕ್ಷ ಅನುದಾನ ಬಿಡುಗಡೆ ಮಾಡಿಸಿ ವಿದ್ಯುತ್ ಸಮಸ್ಯೆ ಬಗೆಹರಿಸಿದ್ದಾರೆ.
ದಾನಿಗಳ ಸಹಕಾರದೊಂದಿಗೆ ಹಾವಂಜೆ ಕೀಳಂಜೆ ಪರಾರಿಯ ನಿವಾಸಿಯೊಬ್ಬರಿಗೆ ಹೊಸ ಮನೆ ನಿರ್ಮಿಸಿಕೊಟ್ಟಿದ್ದು, ಇತರ ಮೂವರಿಗೆ ಮನೆ ರಿಪೇರಿಗೆ ನೆರವಾಗಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಸಹಕಾರದಿಂದ ಸುಮಾರು ೩೦ ಮನೆಗಳಿಗೆ ಹಕ್ಕುಪತ್ರ ಹಾಗೂ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ಬೆಳಕು ನೀಡಿದ್ದಾರೆ.
ಕೀಳಂಜೆ ನಂದಿಕೇಶ್ವರ ದೈವಸ್ಥಾನದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಜೀರ್ಣೋದ್ಧಾರಗೊಂಡ ಪರಾರಿ ಬೊಬ್ಬರ್ಯ ದೈವಸ್ಥಾನಕ್ಕೆ ಶ್ರೀ ಗುರುರಾಜ್ ಭಟ್ ಹಾಗೂ ಲಕ್ಷ್ಮೀಶ ಭಟ್‌ರವರೊಂದಿಗೆ ದಾನಿಗಳನ್ನು ಸಂಪರ್ಕಿಸಿ ವಸ್ತು ಹಾಗೂ ದೇಣಿಗೆ ರೂಪದಲ್ಲಿ ಸುಮಾರು ೫೦ ಲಕ್ಷದಷ್ಟು ಸಹಕಾರ ಕೊಡಿಸಿದ್ದಾರೆ. ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳೊಂದಿಗೆ ಸಾಕಷ್ಟು ಶ್ರಮಿಸಿದ್ದರು. ಇವರ ಪ್ರಾಮಾಣಿಕ ಶ್ರಮಕ್ಕೆ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಬ್ರಹ್ಮಕಲಶ ವೇದಿಕೆಯಲ್ಲಿ ವಿಶೇಷವಾಗಿ ಸನ್ಮಾನಿಸಿದ್ದರು.
ಸತೀಶ್ ಪೂಜಾರಿಯವರು ಕೀಳಂಜೆ ಅಂಗನವಾಡಿಗೆ ಸಂತೆಕಟ್ಟೆಯ ದಾನಿಯೊಬ್ಬರಿಂದ ೩ ಸೆಂಟ್ಸ್ ಜಾಗವನ್ನು ಕೊಡಿಸಿದ್ದರು. ಆದರೆ ಈ ಜಾಗದಲ್ಲಿ ಅಂಗನವಾಡಿ ಆಗದೇ ಇದ್ದರೂ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ರೂ.೧೫ ಲಕ್ಷ ಅನುದಾನ ತರಿಸುವಲ್ಲಿ ಹಾಗೂ ಶಾಲೆಯಲ್ಲಿದ್ದ ಅಂಗನವಾಡಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಹೊಸ ಅಂಗನವಾಡಿ ನಿರ್ಮಿಸುವಲ್ಲಿ ಸತೀಶ್ ಪೂಜಾರಿಯವರು ಪ್ರಮುಖ ಪಾತ್ರ ವಹಿಸಿದ್ದರು.
ಹಾವಂಜೆ ಗ್ರಾಮದ ದೊಂಪದಕುಮೇರಿ ಬಸ್‌ಸ್ಟ್ಯಾಂಡ್ ಶಿಥಿಲಗೊಂಡಾಗ ಸತೀಶ್ ರವರು ಪದೇ ಪದೇ ಮಾದ್ಯಮದ ಮೂಲಕ ವರದಿ ಪ್ರಕಟಿಸಿ ಗಮನಸೆಳೆದು ಬಸ್‌ಸ್ಟ್ಯಾಂಡ್ ನಿರ್ಮಾಣವಾಗುವಂತೆ ಮಾಡಿದ್ದರು.
ಅನೇಕ ಅರ್ಹ ಫಲಾನುಭವಿಗಳಿಗೆ ರೇಷನ್ ಕಾರ್ಡ್, ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ವೇತನ ಸಿಗುವಂತೆ ದಾಖಲೆಗಳನ್ನು ಒದಗಿಸಿ ನೆರವಾಗಿದ್ದಾರೆ.
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಡುಪಿಯ ಮಾಂಡೋವಿ ಬಿಲ್ಡರ್ಸ್ ಸೇರಿದಂತೆ ವಿವಿಧ ದಾನಿಗಳ ಸಹಕಾರದಿಂದ ಅನೇಕ ಕುಟುಂಬಗಳಿಗೆ ಪಡಿತರ ಕಿಟ್ ತಲುಪಿಸಿದ್ದಾರೆ. ಅಪಘಾತ ಸಂಭವಿಸಿದಾಗ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವುದು, ಚಿರತೆ ಉಪಟಳದ ಬಗ್ಗೆ ಅರಣ್ಯ ಇಲಾಖೆ ಗಮನ ಸೆಳೆಯುವುದು ಹಾಗೂ ನ್ಯಾಯ ಪಂಚಾಯತಿಕೆ ಮಾಡಿಸುತ್ತಾ ಬಂದಿದ್ದಾರೆ. ಕರಾವಳಿ ಬೈಪಾಸ್ ಹತ್ತಿರ ಒಣಗಿದ ಮರವೊಂದು ಬೀಳುವ ಹಂತದಲ್ಲಿರುವುದನ್ನು ಕಂಡು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ತೆರವುಗೊಳಿಸಿದ್ದರು. ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಕ್ರಿಟ್ ರಸ್ತೆ ಬಿರುಕು ಬಿಟ್ಟು ಕುಸಿದು ಹೋದದ್ದನ್ನು ಗಮನಿಸಿ ಶಾಸಕರು, ವಾರಾಹಿ ಇಲಾಕಾಧಿಕಾರಿಗಳ ಗಮನಕ್ಕೆ ತಂದು ರಿಪೇರಿಗೊಳಿಸಿದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕಬೀರು ಪಾಣ ಅವರ ಮನೆಗೆ ದಾನಿಗಳ ಸಹಕಾರದಲ್ಲಿ ರೂ.೪೦ ಸಾವಿರ ವೆಚ್ಚದಲ್ಲಿ ವಿದ್ಯುತ್ ಅಳವಡಿಸಿಕೊಟ್ಟಿದ್ದರು. ಇವೆಲ್ಲವೂ ಕೇವಲ ಸ್ಯಾಂಪಲ್‌ಗಳಷ್ಟೆ. ಅವರು ನೂರಾರು ಸಮಸ್ಯೆ ಪರಿಹರಿಸಿದ್ದು ಎಲ್ಲಿಯೇ ಯಾವುದೇ ಸಾಮಾಜಿಕ ಸಮಸ್ಯೆ ಕಂಡರೂ ಅಧಿಕಾರಿಗಳಿಗೆ ಬೆನ್ನು ಬಿದ್ದು ಆ ಕೆಲಸ ಮಾಡಿಸುತ್ತಾ ಬಂದಿದ್ದಾರೆ.
ವಿವಿಧ ಜವಾಬ್ದಾರಿಗಳು:
ತುಳುನಾಡ ರಕ್ಷಣಾ ವೇದಿಕೆ ಬ್ರಹ್ಮಾವರ ಘಟಕದ ಅಧ್ಯಕ್ಷರಾಗಿ, ಕೀಳಂಜೆ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾಗಿ, ಕೀಳಂಜೆ ಶ್ರೀ ಬೊಬ್ಬರ್ಯ ಹಾಗೂ ನಂದಿಕೇಶ್ವರ ದೈವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಪರಾರಿ ಬೊಬ್ಬರ್ಯ ದೈವಸ್ಥಾನದ ಗೌರವಾಧ್ಯಕ್ಷರಾಗಿ, ತ್ರಿವರ್ಣ ವಿಶ್ವ ವೇದಿಕೆಯ ಸ್ಥಾಪಕಾಧ್ಯಕ್ಷರಾಗಿ, ಬ್ರಹ್ಮಾವರ ತಾಲೂಕು ಹೋರಾಟ ಸಮಿತಿ ಹಾಗೂ ಬಿಲ್ಲವ ಯುವ ವೇದಿಕೆ ಉಡುಪಿ ಜಿಲ್ಲೆ ಇದರ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಗೌರವ-ಸನ್ಮಾನಗಳು:
ಸ್ವಾರ್ಥವಿಲ್ಲದೆ, ಪ್ರಚಾರದ ಹಂಬಲವಿಲ್ಲದೆ ಸೇವೆ ಸಲ್ಲಿಸುತ್ತಿರುವ ಇವರ ಸೇವೆಯನ್ನು ಗುರುತಿಸಿ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್, ಪರಾರಿ ಬೊಬ್ಬರ್ಯ ದೈವಸ್ಥಾನ, ಉಪ್ಪೂರು ಯುವ ವಿಚಾರ ವೇದಿಕೆ, ರೋಟರಿ ಕ್ಲಬ್ ಸಂತೆಕಟ್ಟೆ, ಉಪ್ಪೂರು, ಹಾವಂಜೆ ಹಾಗೂ ಕುಕ್ಕೆಹಳ್ಳಿ ಗ್ರಾಮ ಪಂಚಾಯತ್‌ಗಳು ಮತ್ತು ಪೊಲೀಸ್ ಇಲಾಖೆಯಿಂದ ಗೌರವ ಸನ್ಮಾನಗಳು ಇವರಿಗೆ ಸ0ದಿವೆ.
ನೈಜ ಸಾಮಾಜಿಕ ಕಳಕಳಿಯೊಂದಿಗೆ ಸಮಾಜ ಸೇವೆಗಾಗಿ ತಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸುತ್ತಾ ಬಂದಿದ್ದಾರೆ. ಯಾವುದೇ ಸೇವಾ ಕೈಂಕರ್ಯ ಹಿಡಿದರೂ ಅದನ್ನು ಸಂಪೂರ್ಣ ಮುಗಿಸುವುದು ಇವರ ವಿಶೇಷತೆಯಾಗಿದೆ. ತನ್ನ ಪ್ರಾಮಾಣಿಕ ಸೇವಾ ಗುಣಗಳು ಹಾಗೂ ವಿಧೇಯ ಗುಣಗಳಿಂದ ಅಪಾರ ಸ್ನೇಹಿತ ವರ್ಗದವರ ವಿಶ್ವಾಸಗಳಿಸಿಕೊಂಡಿದ್ದಾರೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಕಂದಾಯ ಇಲಾಖಾ ಅಧಿಕಾರಿಗಳು ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕ ಬೆಳೆಸಿಕೊಂಡು ಅವರ ಮೂಲಕವೂ ಜನರ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ.
ಯಾವುದೇ ಸ್ಥಳಿಯಾಡಳಿತದ ಪ್ರತಿನಿಧಿ ಅಲ್ಲದಿದ್ದರೂ ಸ್ಥಳಿಯ ಓರ್ವ ಜನಪ್ರತಿನಿಧಿಯನ್ನು ಸಂಪರ್ಕಿಸುವಂತೆ ಪ್ರತಿನಿತ್ಯ ಜನರು ಇವರನ್ನು ನಾನಾ ಕಾರಣಗಳಿಗಾಗಿ ಸಂಪರ್ಕಿಸುತ್ತಲೇ ಇರುತ್ತಾರೆ. ಪ್ರತಿದಿನ ಬರುವ ಫೋನ್ ಕಾಲ್‌ಗಳಲ್ಲಿ ಕನಿಷ್ಟ 10 ರಿಂದ 15 ಫೋನ್ ಕಾಲ್‌ಗಳಾದರೂ ಜನರ ಕೆಲಸದ ಕರೆಗಳಿರುತ್ತದೆ ಎಂದು ಸತೀಶ್ ಪೂಜಾರಿ ಹೇಳುತ್ತಾರೆ.- ಮಡದಿ ಆಶಾಲತಾ ಹಾಗೂ ಪುತ್ರಿ ಈದ್ಯಶ್ರೀಯವರೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಾ ಸಮಾಜಕ್ಕೆ ಮಾದರಿಯಾಗಿರುವ ಇಂತಹ ನಿಸ್ವಾರ್ಥ ಸಮಾಜ ಸೇವಕರಿಗೆ ಇನ್ನಷ್ಟು ಪುರಸ್ಕಾರಗಳು ಲಭಿಸಲಿ ಎಂಬುದು ಆಶಯವಾಗಿದೆ.

ಅವರಿವರು ಕಂಡಂತೆ ಸತೀಶ್ ಪೂಜಾರಿ :
ಸತೀಶ್ ಪೂಜಾರಿ ಓರ್ವ ಶೀಘ್ರ ಸ್ಪಂದನೆಯ ವ್ಯಕ್ತಿ. ಯಾರಿಗೆ ಯಾವುದೇ ತೊಂದರೆಯಾದರೂ ಅವರ ಸಹಕಾರಕ್ಕೆ ಬಂದು ನಿಲ್ಲುವ ವ್ಯಕ್ತಿತ್ವ ಅವರದ್ದು. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಯಾವುದೇ ಸೇವೆಗಾಗಲಿ ಒಮ್ಮೆ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಹೇಳಿದರೆ ಕೊನೆ ತನಕ ಇದ್ದು ಆ ಕೆಲಸ ಮಾಡಿಕೊಡುವ ವ್ಯಕ್ತಿ. ನಮ್ಮ ಪರಾರಿ ಬೊಬ್ಬರ್ಯ ದೈವಸ್ಥಾನದ ಜೀರ್ಣೋದ್ಧಾರದ ಗೌರವಾಧ್ಯಕ್ಷರಾಗಿ ನಮ್ಮೊಂದಿಗೆ ಕೊನೆ ತನಕ ಇದ್ದು ಅತ್ಯುತ್ತಮ ಸೇವೆ ಸಲ್ಲಿಸಿದವರು. ಸರಕಾರದಿಂದ ಸಿಗುವ ಯಾವುದೇ ಸೌಲಭ್ಯ ಇದ್ದರೂ ಅದನ್ನು ತೆಗಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಗ್ರಾಮ ಮಟ್ಟದ ಕಚೇರಿಯಿಂದ ಹಿಡಿದು ಜಿಲ್ಲಾಧಿಕಾರಿ ಕಚೇರಿ ತನಕ ತಿರುಗಾಡಿ ಆ ಕೆಲಸ ಕೊನೆಗಾಣಿಸುವ ವ್ಯಕ್ತಿತ್ವ ಅವರದ್ದು. ಯಾವುದೇ ಸ್ವಾರ್ಥ ಬಯಸದ ನಿಸ್ವಾರ್ಥ ಸಮಾಜಸೇವಕ ಸತೀಶ್ ಪೂಜಾರಿ.
ಗುರುರಾಜ್ ಭಟ್ ಕೊಳಲಗಿರಿ, ಅಧ್ಯಕ್ಷರು, ಶ್ರೀ ಪರಾರಿ ಬೊಬ್ಬರ್ಯ ದೈವಸ್ಥಾನ

ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆಯವರನ್ನು ಚಿಕ್ಕಂದಿನಿಂದ ತಿಳಿದಿದ್ದೇನೆ. ಒಳ್ಳೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಸಮಾಜದಲ್ಲಿ ಒಳ್ಳೆ ಹೆಸರನ್ನು ಮಾಡುತ್ತಿದ್ದಾನೆ. ಎಲ್ಲಾ ಕೆಲಸವನ್ನು ಚಾಚು ತಪ್ಪದೇ ಮಾಡುವಂತಹ ಸಮಾಜಮುಖಿ ಚಿಂತಕ. ಚುನಾಯಿತ ಪ್ರತಿನಿಧಿ ಅಲ್ಲದಿದ್ದರೂ ಜನರ ಯಾವುದೇ ಕೆಲಸವಿದ್ದರೂ ಮಾಡುವಂತಹ ವ್ಯಕ್ತಿ. ನೇರವಾಗಿ ಅಧಿಕಾರಿಗಳ ಹತ್ತಿರ ತೆರಳಿ ಸಮಸ್ಯೆ ವಿವರಿಸಿ ಕೆಲಸ ಮಾಡಿಸುವ ಇಂತವರು ಗ್ರಾಮ ಪಂಚಾಯತಿಗೆ ಆಯ್ಕೆಯಾಗಬೇಕು.
ದಿನೇಶ್ ಶೆಟ್ಟಿ ಬಾಣಬೆಟ್ಟು, ಉದ್ಯಮಿ
ಸತೀಶ್ ಪೂಜಾರಿ ಕೀಳಂಜೆ ಸಾಮಾಜಿಕ ಕಾರ್ಯಕರ್ತರು. ಅವರು ನಮ್ಮೂರಿನ ಅಚ್ಚುಮೆಚ್ಚಿನ ಜನಸ್ನೇಹಿ ಸಮಾಜ ಸೇವಕನಾಗಿದ್ದಾರೆ. ನೇರ ನುಡಿಯ ಹಾಗೂ ಯಾವುದೇ ಸಾರ್ವಜನಿಕ ಕೆಲಸ ಇದ್ದರೂ ತಕ್ಷಣ ಮಾಡುವಂತಹ ಯುವಕನಾಗಿದ್ದು ಇಂಥವರು ರಾಜಕೀಯ ಕ್ಷೇತ್ರಕ್ಕೆ ಬಂದು ಅಧಿಕಾರ ದೊರೆತಲ್ಲಿ ಇವರಿಗೆ ಇನ್ನೂ ಹೆಚ್ಚಿನ ಸೇವೆ ಮಾಡಲು ಅವಕಾಶ ದೊರಕುತ್ತದೆ. ಹಲವಾರು ಧಾರ್ಮಿಕ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸಿದ ಹೆಗ್ಗಳಿಕೆ ಇವರದ್ದಾಗಿದೆ.
ರಾಮಚಂದ್ರ ನಾಯಕ್ ಕೀಳಂಜಿ. ಉದ್ಯಮಿಗಳು
ಸತೀಶ್ ಪೂಜಾರಿ ಕೀಳಂಜೆ ಗ್ರಾಮೀಣ ಮಟ್ಟದಿಂದ ಬಂದ ಹುಡುಗ. ತುಂಬಾ ಚಟುವಟಿಕೆಯಲ್ಲಿರುವ ಯುವಕ. ಹಾವಂಜೆಯ ಕೀಳಿಂಜೆಯವರಾದರೂ ಕೀಳಿಂಜೆ ಮತ್ತು ಹಾವಂಜೆ ಗ್ರಾಮಕ್ಕೆ ಮಾತ್ರ ಸೀಮಿತರಾಗದೆ ಇಡೀ ಉಡುಪಿ ಜಿಲ್ಲೆಗೆ ಸೀಮಿತ ಎಂದರೂ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ ಯಾವುದೇ ಊರಿನ ಯಾವುದೇ ಸಮಸ್ಯೆ ಇದ್ದರೂ ಸಂಬಂಧಪಟ್ಟ ಇಲಾಖೆ ಬರುವ ಮೊದಲು ಸತೀಶ್ ಪೂಜಾರಿ ಅಲ್ಲಿಗೆ ಬರುತ್ತಾರೆ. ತಕ್ಷಣ ಇಲಾಖೆಯ ಅಧಿಕಾರಿಗಳನ್ನು ಕರೆತಂದು ಅತ್ಯಂತ ಸುಲಲಿತವಾಗಿ ಆ ಸಮಸ್ಯೆಯನ್ನು ಬಗೆ ಹರಿಸುತ್ತಾರೆ. ಒಂದು ವೇಳೆ ಕಾನೂನು ತೊಡಕು ಇದ್ದರೆ ಅಂತಹ ಸಂದರ್ಭಗಳಲ್ಲಿ ಯಾರಾದರೂ ದಾನಿಗಳನ್ನು ಹಿಡಿದು ಅವರಿಂದ ಆ ಕೆಲಸವನ್ನು ಮಾಡಿಸುತ್ತಾರೆ. ಅದಕ್ಕೆ ಎಷ್ಟೇ ಹಣ ಖರ್ಚಾಗಲಿ ಆ ಹಣವನ್ನು ಅವರು ದಾನಿಗಳಿಂದ ಪಡೆಯದೆ ನೇರವಾಗಿ ಸಂಬಂಧಪಟ್ಟವರ ಖಾತೆಗೆ ಹಾಕುವಂತೆ ಹೇಳುತ್ತಾರೆ. ಅಂದರೆ ಹಣದ ವ್ಯವಹಾರ ಅಷ್ಟು ಪಾರದರ್ಶಕವಾಗಿರುತ್ತದೆ. ಉತ್ಸಾಹಿ ಯುವಕ. ಎಲ್ಲರಿಗೂ ಬೇಕಾದ ವ್ಯಕ್ತಿ. ನಿಷ್ಟೂರ ಇಲ್ಲ. ಸಮಾಜಸೇವೆಯ ಹೆಸರಲ್ಲಿ ಮುಖವಾಡ ಹಾಕಿಕೊಂಡು ಇಲಾಖಾ ಅಧಿಕಾರಿಗಳನ್ನು ಪೀಡಿಸುವವರಲ್ಲ. ಇಲಾಖೆಯ ಅಧಿಕಾರಿಗಳೊಂದಿಗೆ, ಜನರೊಂದಿಗೆ, ದಾನಿಗಳೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದಾರೆ.
ಸುರೇಶ್ ಬಿ.ಶೆಟ್ಟಿ, ಹಾವಂಜೆ ಇರ್ಮಾಡಿ ಶೆಟ್ಟಿಬೆಟ್ಟು ಹಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರು

ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜಿ ಅವರು ರೈತರಿಗೆ ಏನಾದರೂ ಸಮಸ್ಯೆ ಆದಾಗ, ಕಾಡುಕೋಣ, ಚಿರತೆಗಳಿಂದ ತೊಂದರೆಯಾದರೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಪೊಲೀಸ್ ಇಲಾಖೆಗೆ ಮಾಹಿತಿ ಕೊಟ್ಟು ರೈತರಿಗೂ ಬಹಳಷ್ಟು ಸಹಕಾರ ನೀಡುತ್ತಾ ಬಂದಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಸುತ್ತಮುತ್ತಲ ಊರಲ್ಲಿ ಸಮಾಜಸೇವೆಯಿಂದಲೇ ಜನರ ವಿಶ್ವಾಸ ಗಳಿಸಿ ಒಳ್ಳೆಯ ಹೆಸರನ್ನು ಮಾಡಿದ್ದಾರೆ. ಜನರ ಸೇವೆ ಮಾಡುವ ಇಂತವರು ಸ್ಥಳಿಯಾಡಳಿತದ ಪ್ರತಿನಿಧಿಗಳಾದಲ್ಲಿ ಜನರಿಗೆ ಇನ್ನಷ್ಟು ಹೆಚ್ಚಿನ ಸೇವೆ ಲಭಿಸಲಿದೆ.
ಮೀರಾ ಸತೀಶ್ ಪೂಜಾರಿ (ಸತಿ) ಕೀಳಂಜೆ,ರೈತ ಮುಖಂಡರು

ಸತೀಶಣ್ಣ ಉತ್ತಮ ಸಮಾಜಸೇವಕರು. ನನಗೆ ಹಕ್ಕು ಪತ್ರ ಮಾಡಿಸಿಕೊಟ್ಟು ಬಹುದೊಡ್ಡ ಉಪಕಾರ ಮಾಡಿದ್ದಾರೆ. ಅವರು ನನ್ನ ಪಾಲಿಗೆ ಆಪತ್ಬಾಂಧವರು. ಯಾವುದೇ ಸಮಸ್ಯೆ ಇದ್ದರೂ ತಕ್ಷಣ ಪರಿಹಾರದ ಮಾರ್ಗ ಕಂಡು ಹಿಡಿಯುತ್ತಾರೆ. ಅವರಲ್ಲಿ ನಿಸ್ವಾರ್ಥ ಸೇವೆಯ ಗುಣ ಇರುವುದರಿಂದ ಅವರೊಂದಿಗೆ ನಾವಿದ್ದೇವೆ. ಅವರು ಇನ್ನೂ ಎತ್ತರಕ್ಕೆ ಬೆಳೆಬೇಕೆಂದು ನಮ್ಮೆಲ್ಲರ ಆಶಯ. ಮುಂದಿನ ದಿನಗಳಲ್ಲಿ ಅವರನ್ನು ಚುನಾವಣೆಗೆ ನಿಲ್ಲಿಸುವ ಯೋಚನೆ ನಮ್ಮೆಲ್ಲರಲ್ಲಿದೆ.
ನಾಗರಾಜ್ ಮೊಗವೀರ ಕೀಳಂಜೆ. ಮೊಗವೀರ ಮುಖಂಡರು.
ನಾನು ಕಂಡಂತೆ ಅನೇಕ ವರ್ಷಗಳಿಂದ ಸತೀಶ್ ಪೂಜಾರಿಯವರು ಒಳ್ಳೆಯ ಸಮಾಜಸೇವಕರಾಗಿ ಮುಂದುವರಿದು ಬಂದಿದ್ದಾರೆ. ಯಾರಾದರೂ ಅನಾರೋಗ್ಯಕ್ಕೆ ಒಳಗಾದಲ್ಲಿ ಆರೋಗ್ಯ ಇಲಾಖೆಯವರಿಗೆ ಫೋನ್ ಮಾಡಿ ತಕ್ಷಣ ಸಹಕಾರ ಕೊಡುತ್ತಾರೆ. ಮೊನ್ನೆ ಮೊನ್ನೆ ನನ್ನ ಮಗಳ ಮಾವನಿಗೆ ಹುಷಾರಿಲ್ಲದಾಗ ಅವರೇ ಅಜ್ಜರಕಾಡು ಆಸ್ಪತ್ರೆಗೆ ಮಾತನಾಡಿ ಅಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ನಾನು ಗಮನಿಸಿದಂತೆ ಅವರೊಬ್ಬರು ಒಳ್ಳೆಯ ಸೋಶಿಯಲ್ ವರ್ಕರ್.
ಮಾಧವ ಪಾಣ ಅಮ್ಮುಂಜೆ, ಗೌರವ ಸಲಹೆಗಾರರು, ಉಡುಪಿ ಜಿಲ್ಲಾ ಪಾಣ ಯಾನೆ ನಲ್ಕೆಯವರ ಸಮಾಜ ಸಂಘ




